Posts

Showing posts from 2016

DAY-LIGHT?

Image
        ಹಗಲುದೀಪ?         ನಿಜ, ಇದು ಹಗಲುದೀಪವೇ.  ರಾತ್ರಿಕಾಲದಲ್ಲಿ ಚಿತ್ರಿಸಿದ್ದಲ್ಲ, ಪರಂತು- ಮಟಮಟಮಧ್ಯಾಹ್ನದಲ್ಲಿ ಸೆರೆಹಿಡಿದದ್ದು. ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಸಮಯಾವಕಾಶವಿನ್ನೂ ಇತ್ತಾಗಿ  ಕ್ಯಾಮರಾ ನೆನಪಾಯಿತು.  ಹೋಗಿದ್ದು ಬೇರೆ ಕಡೆಗೇ ಆದರೂ ಮಾರ್ಗಮಧ್ಯೆ ರಸ್ತೆಗಳ ಕೂಡೊಂದರಲ್ಲಿ  ಸಂಚಾರ ನಿಯಂತ್ರಣ  ವ್ಯವಸ್ಥೆಗಾಗಿ   ನಿಲ್ಲಿಸಬೇಕಾಗಿ ಬಂತು.  ಸುಮ್ಮನೆ ಹಾಗೇ  ಅತ್ತಿತ್ತ ನೋಡುತ್ತಿದ್ದವನಿಗೆ ಕಂಡದ್ದೇ ಈ ದೀಪದಕಂಬ. ಆ ಕಡೆ ವಾಹನಸಂಚಾರಕ್ಕೆ  ತೆರವಾದರೂ  ಗಮನಿಸದೇ ನನ್ನ ವಾಹನವನ್ನು ರಸ್ತೆಬದಿಗೆ ಹಾಕಿ, ಓಡಿದೆ. ನಡುಮಧ್ಯಾಹ್ನವಾದ್ದ ರಿಂದ  ನೆತ್ತಿಯಮೇಲೇ  ಸೂರ್ಯ! ತಲೆಯೆತ್ತಲಾಗದ ಪ್ರಖರತೆ! ಕ್ಯಾಮರಾ ಬಳಸುವ ಚಾಪಲ್ಯ ಅದನ್ನೂ ಮೀರಿದ್ದು! ಹಾಗಾಗಿ ಆ ಕಂಬವನ್ನು ಇಲ್ಲಿ ಹಿಂದೀಪ್ತವಾಗುವಂತೆ [silhoutte] ಮಾಡಿದೆ.          ನಿಮೇಷವೇಗವನ್ನು  ಸಾವಿರಗಳಲ್ಲಿ ತಂದಿಟ್ಟು, ಇಲ್ಲಿ ಕಂಬದ ತುದಿಯಲ್ಲಿರುವ ದೀಪದ ಆವರಣಕ್ಕಾಗಿ ಮಾಡಿರುವ ಗಾಜಿನ ಬುರುಡೆಯನ್ನು ನೇರವಾಗಿ ಸೂರ್ಯನ ಬಿಂಬಕ್ಕೆ ಅಡ್ಡವಾಗಿ - ದೃಷ್ಟಿಪಥಕ್ಕೆ ಸರಿಯಾಗಿ  ಹಿಡಿದು ಕ್ಲಿಕ್ಕಿಸಿದ ಚಿತ್ರವಿದು.  ಡಿಎಸ್ಎಲ್ಆರ್  ಒಂದ...

PORTRAITURE OF UNDERWORLD DONS.

Image
ಪ್ರಸಿದ್ಧ ಖಳನಾಯಕರ  ವ್ಯಕ್ತಿಚಿತ್ರ...          ಕೆಲವು ದಶಕಗಳ ಹಿಂದೆ ಮುಂಬಯಿ ಭೂಗತಪ್ರಪಂಚದ  ನಾಯಕರು ಕೆಲವರು ಜನಜನಿತರಾಗಿದ್ದರು.  ಅವರುಗಳ ಸ್ವಭಾವ, ಕಾರ್ಯಶೈಲಿ, ಕಾಠಿಣ್ಯ ಹಾಗೂ ತಮ್ಮವರಲ್ಲಿ ಕರುಣೆ ಇತ್ಯಾದಿ ಸಂಗತಿಗಳು ಜನಸಾಮಾನ್ಯರಿಗೆ  ದಂತಕತೆಗಳಾಗಿದ್ದವು.  ಆ ಪ್ರಪಂಚದಲ್ಲಿಯೂ ಬದಲಾವಣೆಯ ಗಾಳಿ ಬೀಸಿತು,  ಹಾಲಿ[ಜಿ]ಗಳಾಗಿದ್ದವರು, ಜನರಿಗೆ ವರ[ಪ್ರ]ದರಾಗಿದ್ದವರು  ಕಾರ್ಯಕ್ಷೇತ್ರದಿಂದ ಹಾಗೂ ಜೀವನದಿಂದಲೂ  ಕೂಡಾ ನಿವೃತ್ತರಾದರು.  ಹೊಸದಾಗಿ ತಲೆಯೆತ್ತಿದವ  ತನ್ನ ಪೂರ್ವಸೂರಿಗಳಂತೆ  ತನ್ನ ವಲಯಗಳಲ್ಲಾದರೂ  ಸುಪ್ರಸಿದ್ಧನಾಗಲಿಲ್ಲ; ಪರಂತು ಸರ್ವಲೋಕಾಪಕಾರಿಯೇ ಆದ,  ಸರಸ್ಸನ್ನು ಹೊಕ್ಕ ಸುಯೋಧನನಂತೆ  ದೇಶಬಿಟ್ಟೋಡಿ  ದೂರದಿಂದಲೇ ವ್ಯವಹಾರ ನಡೆಸಿದ.          ಇರಲಿ,  ಪ್ರಸ್ತುತ  ಪ್ರಸಂಗಕ್ಕೆ ಬರೋಣ.  ಹಳೆಯ ಮನೆಯೊಂದನ್ನು ಕೆಡವಿ ಹೊಸತಾಗಿ ನಿರ್ಮಿಸುತ್ತಿದ್ದ  ಜಾಗವೊಂದು ಕಣ್ಣಿಗೆ ಬಿತ್ತು.  ಹಳೆಯ ಮನೆಯಿಂದ ತೆಗೆದ ಛಾವಣಿಯ ಪಕ್ಕಾಸು, ಹೆಂಚುಗಳನ್ನು  ಅಲ್ಲೇ ಪಕ್ಕದ ಗಲ್ಲಿಯಲ್ಲಿ ಜೋಡಿಸಿದ್ದರು.  ಹಿನ್ನೆಲೆಯ  ಗೋಡೆಯೂ ಶಿಥಿಲವಾಗಿತ್ತು.  ಅಲ್ಲಿ ಮುಂದೆ ಒಂದೆರಡು ಚಿಮಣಿತಲೆಯುಳ್ಳ ಹೆಂಚುಗ...

CANAL CORNER- Part 2.

Image
ಕಾಲುವೆ ಮೂಲೆಯಲ್ಲಿ ಸೂರ್ಯಾಸ್ತ

CANAL CORNER.

Image
ಕಾಲುವೆ ಮೂಲೆ.          ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ  [ಮೈಸೂರಿನಿಂದಹೊರಟು]  ಫನ್ ಫೋರ್ಟ್ ವಿಹಾರಸ್ಥಾನ ದಾಟಿದ ಮೇಲೆ  ಸ್ವಲ್ಪ ಮುಂದಿರುವ  ಕಾಲ್ದಾರಿಯೊಂದರಲ್ಲಿ ಎಡಗಡೆ ಸಾಗಿದರೆ ಸುಮಾರು ನೂರು ಮಾರು ದೂರದಲ್ಲಿ ದೇವರಾಜ ನಾಲೆ  ಎದುರಾಗುತ್ತದೆ.  ಈ ತಾಣದಲ್ಲಿ ಕಾಲುವೆ ಕುದುರೆಲಾಳದ ಆಕಾರದಲ್ಲಿ  ತಿರುವು ಪಡೆದಿದೆ- ಹಾಗಾಗಿ ಮೂಲೆ ಎಂದು ಕರೆಯಲ್ಪಡುತ್ತದೆ.  ಈ ತಿರುವಿನ ನೇರ ಹಿನ್ನೆಲೆಯಲ್ಲಿ  ಪಾಲಹಳ್ಳಿ ರೈಲುನಿಲ್ದಾಣವಿದೆ.  ಹೆದ್ದಾರಿಯಿಂದ ಕೂಗಳತೆ  ದೂರದಲ್ಲಿರುವ  ಈ ಕಾಲುವೆ ಮೂಲೆ  ಪ್ರಶಾಂತವಾದ ಸ್ಥಳ.   ಪಕ್ಷಿಛಾಯಾಗ್ರಾಹಕರು ಕೆಲವರು ಆಗಾಗ ಬರುವುದುಂಟು. ಸ್ಥಳೀಯ ಬಾಲಕರು  ಜಲವಿಹಾರಕ್ಕೆಂದೂ  ಇಲ್ಲಿಗೆ ಬರುವರು.  ಕಾಲುವೆಯಲ್ಲಿ ನೀರು ಹರಿವಿದ್ದಾಗ  ಅದ್ಭುತರಮ್ಯದೃಶ್ಯವೊಂದು   ಸಂಭವಿಸುತ್ತದೆ-  ಸೂರ್ಯಾಸ್ತದ ವೇಳೆಗೆ.  ಇತ್ತೀಚೆಗಿನ ದಿನಗಳಲ್ಲಿ ನಾನು ಪದೇ ಪದೇ ಎಡತಾಕುವ  ತಾಣವಿದು.          ಡಿಜಿಟಲ್ ಕ್ಯಾಮರಾದಲ್ಲಿ ಸರಣಿಚಿತ್ರಗಳನ್ನು ತೆಗೆದು  ಆಮೇಲೆ  ತಂತ್ರಾಂಶದ ನೆರವಿನಿಂದ  ಅವುಗಳನ್ನು ಒಂದೇ ಚಿತ್ರವಾಗುವಂತೆ  ಹೊಲಿಯುವ - ಫೋಟೋಸ್ಟಿಚಿಂ...

FLYOVER AT KENGERI.

Image
        ಕೆಂಗೇರಿಯಲ್ಲಿನ  ಮೇಲ್ದಾರಿ.           ಮೈಸೂರು- ಬೆಂಗಳೂರು ರಸ್ತೆಯಲ್ಲಿನ ಕೆಂಗೇರಿಯ ಮೇಲ್ದಾರಿಸೇತುವೆ  ನನ್ನ ಪ್ರಕಾರ ಪ್ರೇಕ್ಷಣೀಯವೇ.  ಸೂರ್ಯಾಸ್ತದ ಸಮಯದಲ್ಲಿ ಆ ಕಮಾನಿನ ತುದಿಯಲ್ಲಿ ಮೂಡಿಬರುವ  ಸೂರ್ಯನ ಬಿಂಬವು  ದೃಶ್ಯದ ಒಟ್ಟಂದಕ್ಕೆ ಬಲು ಪೂರಕವಾಗಿ, ಮನೋಹರವಾಗಿರುತ್ತದೆ.          ಪ್ರಸ್ತುತ ಪ್ರಸಂಗದಲ್ಲಿ.   ನನ್ನ ಕೈಯಲ್ಲಿ ಡಿಎಸ್ಎಲ್ಆರ್  ಇರಲಿಲ್ಲ, ಬದಲಾಗಿ ಕಿರುಕ್ಯಾಮೆರಾ  [Compact Camera] ಮಾತ್ರ ಇದ್ದಿತು. ಹಾಗಾಗಿ CA ಮುಂತಾದ ವೈಕಲ್ಯಗಳು  ಅಧಿಕವಾಗಿವೆ.   ಸೂರ್ಯಾಸ್ತವಾದ   ಕೆಲವೇ ಕ್ಷಣಗಳಲ್ಲಿ  ಸೆರೆಸಿಕ್ಕ  ನೋಟ ಹೀಗೆ. ನೆಲೆಮಟ್ಟದಲ್ಲಿರುವ ರಸ್ತೆದೀಪದ ಕಂಬವಾದರೂ ತಗ್ಗಿನಪಾತಳಿಯಿಂದ ಮೇಲುಗಡೆಗೆ ನೋಡುವ ವಿವೀಕ್ಷೆಗೆ  ಸೇತುವೆಯ ಕಮಾನಿನ ಎತ್ತರವೇ  ಕಾಣುತ್ತದೆ  ಹಾಗೂ  ಚಿತ್ರದ ಬಹುಪಾಲು ತುಂಬಿರುವ  ಈ ಕಮಾನಿಗೆ ಪ್ರತ್ಯರ್ಥಿಯಾಗಿ  ಒಂಟಿಯಾಗಿ  ಸಾಟಿಯಾಗಿ ನಿಂತಿದೆ.  ಹಿನ್ನೆಲೆಯಲ್ಲಿನ ದೇದೀಪ್ಯಮಾನವಾದ ಆಕಾಶವು  ಈ ಇಡೀ ಮೇಲಾಟಕ್ಕೆ  ವೇದಿಕೆಯನ್ನೊದಗಿಸಿದೆ. 

THE TEA SELLER.

Image
ಚಹಾ ಮಾರುವ ಹುಡುಗ...          ನಸುಕಿನಲ್ಲ್ಲಿನಗರದ ಹೃದಯಭಾಗದಲ್ಲಿ  ಕಾರ್ಯನಿಮಿತ್ತವಾಗಿ  ಸಾಗುತ್ತಿದ್ದ ನನಗೆ   ಟ್ರಾಫಿಕ್ ನಿಲುಗಡೆಯೊಂದರಲ್ಲಿ ರಸ್ತೆ ದಾಟುತ್ತಿದ್ದ ಈ ಚಹಾ ಮಾರುವ ಹುಡುಗ ಕಂಡನು.  ಅಲ್ಲಲ್ಲಿ ತನಗೆದುರು ಕಂಡ ಜನರನ್ನು  ಬಿಡದೆ  ಚಹಾ ಬೇಕೇ ಎಂದು ವಿಚಾರಿಸುತ್ತಾ ತನ್ನ ವ್ಯವಹಾರವನ್ನು ನಡೆಸಿದ್ದನವನು.  ತಟ್ಟನೆ ಏನೋ ಹೊಳೆದಂತಾಗಿ ನನ್ನ ವಾಹನವನ್ನು ನಿಲ್ಲಿಸಿ,  ಅವನು ರಸ್ತೆ ದಾಟುವುದರೊಳಗಾಗಿ ನನಗೆ ಸರಿಕಂಡ ಆಯಕಟ್ಟಿನ ಸ್ಥಳದಲ್ಲಿ ಬಂದು ನಿಂತು ಕಾದೆ.  ಅಷ್ಟುಹೊತ್ತಿಗಾಗಲೇ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ  ಕಾರ್ಯಾರಂಭಿಸಿತ್ತು. ಅವನು ರಸ್ತೆ ದಾಟುವುದಕ್ಕೂ ಹಿಂದೆ ಬರುತ್ತಿದ್ದ ವಾಹನಗಳು ನಿಲ್ಲುವುದಕ್ಕೂ ಸರಿಹೋಯಿತು. ಕೈಲಿದ್ದ ಕ್ಯಾಮರಾ ಹಲವು ಸಲ ಕ್ಲಿಕ್ಕಿಸಿತು.  ಅದರ ಫಲಿತವು ಇಲ್ಲಿದೆ.          ಮೊದಲನೆಯದಾಗಿ, ಆ ಹುಡುಗನ ಜೀವನಶ್ರದ್ಧೆ ಇಷ್ಟವಾಯಿತು. ಮುಂಜಾವಿನ ಚಳಿಗೆ ಲೆಕ್ಕಿಸದೆ ಹೊಟ್ಟೆಪಾಡಿನ ಬಗ್ಗೆ ಗಮನವಿಟ್ಟದ್ದು  ಧನಾತ್ಮಕವೆನ್ನಿಸಿತು.  ಎರಡನೆಯದಾಗಿ,  ಹಿನ್ನೆಲೆಯಲ್ಲಿ ಸಾಲುಗಟ್ಟಿರುವ ವಾಹನಗಳು-   ಮುಂಚೂಣಿಯಲ್ಲಿರುವ ಮೂರರಲ್ಲಿ ಎರಡು ಸರಕುಸಾಗಣೆ ಮಾಡುವ ವಾಣಿಜ್ಯವಾಹನಗಳು,  ಆಗಲೇ  ತಮ್ಮ ವಹಿವಾಟು ಪ್ರ...

SIXTEEN PILLARED MANTAPAM AT NANJANAGOODU

Image
ಹದಿನಾರು ಕಂಭಗಳ  ಮಂಟಪ.          ನಂಜನಗೂಡಿನಲ್ಲಿ ಕಪಿಲಾ ನದಿಯೊಳಗೆ ಹದಿನಾರು ಕಂಭಗಳ ಮಂಟಪವೊಂದಿತ್ತು.  ಪುರಾತನವಾದದ್ದು, ಆದರೆ ಈಗ ನೀರಿನ ಅಥವಾ ಕಾಲನ ಹೊಡೆತಕ್ಕೆ ಸಿಕ್ಕೋ ಏನೋ-  ಎಲ್ಲಾ ಕಂಭಗಳೂ ಕುಸಿದು ಹೋಗಿ, ಈ ಸ್ಥಳ ಖಾಲಿಯಾಗಿದೆ. ಎಂದರೆ ಮಂಟಪ ಇತ್ತೆಂಬ ಯಾವ ಕುರುಹೂ ಕಾಣಬರುವುದಿಲ್ಲ.  ಸಿಕ್ಕದ್ದೇ ಮತ್ತು ಸಿಕ್ಕಷ್ಟೇ ಅದೃಷ್ಟವೆಂದು ಭಾವಿಸಿ ಈ ಚಿತ್ರವನ್ನು ನನ್ನ ಸಂಗ್ರಹಕ್ಕೆ ಸೇರಿಸಿಕೊಂಡೆನು. ಡಿಜಿಟಲ್ ಛಾಯಾಗ್ರಹಣದ ಪೂರ್ವಪರ್ವದ ಫಿಲ್ಮ್ ಬಳಕೆಯ ದಿನಗಳಲ್ಲಿ  ಈ ಮಂಟಪವನ್ನು ಚಿತ್ರಿಸಿದ್ದೇ ಚಿತ್ರಿಸಿದ್ದು. ಆಗ ಇದು ಅಖಂಡವಾಗಿ, ಅಕ್ಷತವಾಗಿತ್ತು.          ಕೇವಲ ದಶಕವೊಂದರ ಹಿಂದೆಯೂ ಸುಸ್ಥಿತಿಯಲ್ಲಿದ್ದ, ಭಾರಿ ಕಲ್ಲುಗಳ ರಚನೆಯೊಂದು  ಈಗ ಇಲ್ಲವೇ ಇಲ್ಲವೆಂದರೆ ಅದು ಅದು ಇತ್ತೀಚಿಗೆ ಉಂಟಾಗುತ್ತಿರುವ ನದಿನೀರಿನ ಪ್ರವಾಹದ ಪರಿಣಾಮವಲ್ಲದೆ  ಮನುಷ್ಯಕೃತವೆನ್ನಲಾದೀತೇ? ಶಾಂತಂ ಪಾಪಂ! ಪ್ರಸ್ತುತ:   ತಾ//8.2.17.   ನಿನ್ನೆ  ನಂಜನಗೂಡಿಗೆ ಹೋಗಿದ್ದಾಗ ಕಣ್ಣಿಗೆ ಕಂಡದ್ದು-  ಆ ಮಂಟಪವು ಪುನರುಜ್ಜೀವನಗೊಂಡು  ನಿಂತಿದೆ!! ಆಡಳಿತಯಂತ್ರ  ಅಂತೂ ಎಚ್ಚರಗೊಂಡಿದೆ! ಸದ್ಯ!

VARUNA LAKE.

Image
ವರುಣಾ-ಕರುಣಾ...          ಮೈಸೂರಿನಿಂದ ತಿ. ನರಸೀಪುರಕ್ಕೆ ಹೋಗುವ ಮಾರ್ಗದಲ್ಲಿ ಅನತಿ ದೂರದಲ್ಲೇ ವರುಣಾ ಗ್ರಾಮವೂ, ಅಲ್ಲೇ ಎಡಬದಿಗೆ ವರುಣಾಕೆರೆಯೂ  ಸಿಗುತ್ತವೆ.  ಇತ್ತೀಚೆಗಂತೂ ದಸರಾ ಕಾಲದಲ್ಲಿ ಜಲಕ್ರೀಡೆಗಳಿಗೋಸ್ಕರ  ಇದನ್ನು ತುಂಬಿಸಿರುತ್ತಾರೆ.  ಕೆಲವರ್ಷಗಳ ಹಿಂದೆ ಈ ಕೆರೆಯ ಎಡಪಕ್ಕದಲ್ಲಿ  ಸಮೃದ್ಧವಾದ ಮರಗಳ ತೋಪೊಂದಿತ್ತು.  ಕ್ರಮೇಣ ಅವುಗಳು ಒಂದೊಂದಾಗಿ, ಗುಂಪುಗುಂಪಾಗಿ   ನಮಗೆಲ್ಲಾ ಅರ್ಥವಾಗದ ಯಾವುದೋ ಘನವಾದ ಕಾರಣಗಳಿಂದ  ಕೊಡಲಿಗಳಿಗೆ ಬಲಿಯಾದವು.  ಹಲವಾರು ಸಲ ಆ ತಾಣಕ್ಕೆ ಹೋಗಿಬರುವ ಪರಿಪಾಠವನ್ನಿಟ್ಟುಕೊಂಡಿದ್ದ  ನನಗೆ  ಈ ವೃಕ್ಷಹನನ ನೋವನ್ನುಂಟುಮಾಡಿತು.  ನನ್ನದೇ ರೀತಿಯಲ್ಲಿ  ಇದನ್ನು ಹೀಗೆ ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದೇನೆ.          ಪ್ರಕೃತಿ ಸುಂದರ: ಎಂದು ಭಾವುಕವಾಗಿ   ಇಲ್ಲಿನ  ಮೇಘಮಾಲಾಲಂಕೃತವಾದ  ಆಕಾಶವನ್ನೂ, ೨/೩ ಅನುಪಾತದಲ್ಲಿ ದೃಶ್ಯವಾಗಿ ಸಂಯೋಜಿಸಿರುವುದನ್ನೂ ಈ ಸಲ ಪ್ರಸ್ತಾಪಿಸುತ್ತಿಲ್ಲ- ಅವುಗಳನ್ನು ಬಿಟ್ಟು, ಇಲ್ಲಿ ಮುನ್ನೆಲೆಯಲ್ಲಿ ಕಾಣುತ್ತಿರುವ ಮರಗಳ ಕರುಣಾಕಥೆಯ ಕಡೆ ಗಮನ ಸೆಳೆಯುತ್ತಿದ್ದೇನೆ.  ಶಿರಚ್ಛೇದನಕ್ಕೆ ಒಳಗಾಗಿರುವ ತಮ್ಮವನೇ ಆದ ಮಿತ್ರನ[ಮಧ್ಯದಲ್ಲಿರುವ ತುಂಡಾದ ಮರ] ...

COL. BAILEY'S DUNGEON.

Image
ನೆರಳು  ಬೆಳಕಿನ ಚಿತ್ತಾರ-       ಶ್ರೀರಂಗಪಟ್ಟಣದ ಕರ್ನಲ್ ಬೈಲಿ ನೆಲಮಾಳಿಗೆ ಸೆರೆಮನೆಯಲ್ಲಿ ಹಲವಾರು ಛಾಯಾಗ್ರಹಣದ ಅವಕಾಶವಿರುತ್ತದೆ. ಇದೊಂದು ಸರಳವಾದ ಸಂಯೋಜನೆಯಷ್ಟೇ.                  ಇಲ್ಲಿ ಅತಿ ಪ್ರಖರವಾದ ಬೆಳಕಿನ ರಾಚುವಿಕೆ ಇದೆ - ಹಾಗೇ ಗಾಢವಾದ ನೆರಳಿನ ಆವರಣವೂ ಇದೆ.   ನಡುವೆಲ್ಲಾ  ಬೆಳಕಿನಿಂದ ಕತ್ತಲಿನೆಡೆಗೆ  ಹಲವಾರು ಛಾಯಾ ವೈವಿಧ್ಯಗಳು.  ಕಂಭಗಳ ಮೇಲೆ ಮೂಡಿರುವ ಪ್ರಖರವಾದ ಬೆಳಕಿನ ಪಟ್ಟಿಗಳ ಧಾರ್ಷ್ಟ್ಯಕ್ಕೆ  ಸುತ್ತ ಕಮಾನುಗಳ ಆಕೃತಿಯಲ್ಲೂ, ಹಾಗೇ  ನೆಲದ  ಚಪ್ಪಟೆಯ ಪಾತಳಿಯಲ್ಲೂ  ಕಂಡುಬರುವ ನೆರಳು ಅಥವಾ ಕತ್ತಲೆಯ ಗಾಢತೆಯು  ಆವರಿಸಿಕೊಂಡು ಸಮಾಧಾನಿಸುತ್ತಿರುವಂತಿದೆ.  ಇದು ನಮ್ಮ ಮಣ್ಣಿನ ಗುಣವಲ್ಲವೇ ? ಶತಮಾನಗಳ ಕಾಲ ಪರಕೀಯರ ಆಕ್ರಮಣಕ್ಕೆ  ತುತ್ತಾದರೂ ಅವೆಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡು ನಮ್ಮತನವನ್ನು ಬಿಟ್ಟುಕೊಡದೇ  ಉಳಿದುಬಂದವರು ನಾವು.  ಈ ಚಿತ್ರದಲ್ಲಿನ ಸಾಲುಕಂಭಗಳಲ್ಲಿ ಕೆಳಮುಖವಾಗಿ ಚೂಪುಚೂಪಾಗಿ  ಮೂಡಿರುವ  ಬೆಳಕಿನ ಪಟ್ಟೆಗಳು ಅಲ್ಲಿ  ಆಳಿದ,  ನಮ್ಮನ್ನು ಅಳಿಸಿದ ಯವನಾಧಮನ  ದಮನಕಾರಿ ಕ್ರೌರ್ಯವನ್ನೂ,  ನೆಲದ ಹಾಗೂ ಕಮಾನುಗಳ  ನೆರಳ...

DEBATE FOR BATHING.

Image
ಯಂಕ, ನಾಣ  ಮತ್ತು ಸೀನ-  ಸ್ನಾನೋಪಾಖ್ಯಾನ.                         ಮಳವಳ್ಳಿಯಿಂದ  ಕೊಳ್ಳೇಗಾಲಕ್ಕೆ ಹೋಗುವ ಹೆದ್ದಾರಿಯಲ್ಲಿ ಕಾವೇರೀನದಿ ಸೇತುವೆಯ ಮೇಲಿನಿಂದ  ಕ್ಲಿಕ್ಕಿಸಿದ  ಸೂರ್ಯಾಸ್ತದ ದೃಶ್ಯವಿದು.  ಸೂರ್ಯಾಸ್ತದ ಸೊಬಗಿಗಿಂತ  ಇಲ್ಲಿ ಕಾಣುತ್ತಿರುವ ಮೂವರು ಮಿತ್ರರ ಮಾತುಕತೆಗಳು ನನಗೆ ಹೆಚ್ಚು  ಆಸಕ್ತಿಯನ್ನುಂಟುಮಾಡಿದವು.  ಅವರನ್ನು ಮಾತನಾಡಿಸಿ,  ಕೇಳಿದಾಗ ತಿಳಿದುಬಂದದ್ದು ಇದು :-           ಜಲವಿಹಾರಕ್ಕೆಂದು ಮುಂಜಾನೆಯೇ ಬಂದವರಂತೆ[ಸ್ನಾನವೂ ಸೇರಿ],  ಎಡದಿಂದ ಕ್ರಮವಾಗಿ ಅವರ ಹೆಸರುಗಳು ಯಂಕ, ನಾಣ ಮತ್ತು ಸೀನ ಎಂದಂತೆ.  ಯಂಕನಿಗೆ ತಣ್ಣೀರು ಎಂದರೆ ಅಲರ್ಜಿ- ಹಾಗಾಗಿ ಏನೇ ಆಟವಾಡಿದರೂ ನೀರಿಗೆ ಮಾತ್ರ ಇಳಿಯುವುದಿಲ್ಲ ಎಂದು ಘೋಷಿಸಿದವನೇ ಸ್ನಾನವನ್ನೂ  ಮಾಡದೇ ಬೆಳಗ್ಗಿನಿಂದ ಹಾಗೇ  ಉಳಿದಿದ್ದಾನೆ.  ನಾಣ  ಅತಿ ಜಾಗರೂಕನಾದ್ದರಿಂದ  ಬೆಳಗ್ಗೆ ಇಲ್ಲಿಗೆ ಬಂದ  ತಕ್ಷಣವೇ  ನೀರಿನಲ್ಲಿ ಮುಳುಗೆದ್ದು ಮಿಂದು  ಆಗಿನಿಂದ ವಿಹಾರಪರನಾಗಿದ್ದಾನೆ.  ಇನ್ನು  ಸೀನನಾದರೋ,  ಉಳಿದಿಬ್ಬರಿಗಿಂತ ಭಿನ್ನನಾದುದರಿಂದ   ಸೂರ್...

WATER TANK NEAR BANAKAL PETE.

Image
       ಮರದಮೇಲಿನ  ನೀರಿನತೊಟ್ಟಿ.                                           ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಹೋಗುವ ದಾರಿಯಲ್ಲಿ ಬಣಕಲ್ ಪೇಟೆಗೆ ಮುನ್ನ ರಸ್ತೆಯ ತಿರುವೊಂದರಲ್ಲಿ  ಸಿಗುವ ಉಪಹಾರಗೃಹದ  ಭಾಗಶಃ ಚಿತ್ರವಿದು.  ಅವರು ಛಾವಣಿ ಮೇಲಿರಿಸುವ ನೀರಿನ ತೊಟ್ಟಿಯನ್ನು  ಹಿತ್ತಲಿನ ಮರವೊಂದರ ಮೇಲೆ ಸ್ಥಾಪಿಸಿರುವ  ಚಾತುರ್ಯವನ್ನು ನೋಡಿ ಮೆಚ್ಚಿಗೆಯಾಯಿತು,  ಕ್ಲಿಕ್ಕಿಸಿ ನನ್ನ ಸಂಗ್ರಹಕ್ಕೆ ಸೇರಿಸಿಕೊಂಡೆ.           ಜೀವಂತವಾಗಿರುವ ಮರವಾದ್ದರಿಂದ ಭದ್ರವಾಗಿ ಬೇರೂರಿದೆ. ಅಷ್ಟು ಭಾರವನ್ನು ಖಂಡಿತಾ ತಾಳಿಕೊಳ್ಳುತ್ತದೆ.  ಹೀಗೆ ಪರಿಸರದೊಂದಿಗೆ ಬೆರೆತು ಮಾಡಿಕೊಳ್ಳುವ ಅನುಕೂಲಗಳ ಪರಿಕಲ್ಪನೆಯೇ ಆಹ್ಲಾದಕರ!!

FROM OVER JAVAGANAHALLI HILLOCK...

Image
        ಜವಗನಹಳ್ಳಿ ಗುಡ್ಡದ ಮೇಲಿನಿಂದ.....           ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ಹೆದ್ದಾರಿಯಲ್ಲಿ  ಕಾವೇರೀ ನದಿಗುಂಟ  ಸಾಗುವಷ್ಟು  ಭಾಗದ  ಬಲಗಡೆ  ಸ್ವಲ್ಪ ಎತ್ತರವಾದ ಗುಡ್ಡಗಳ ಸಾಲು ಇದೆ,  ಜವಗನಹಳ್ಳಿ ಗುಡ್ಡ ಎಂದು  ಅದರ ಹೆಸರು.  ಆ ರಸ್ತೆಯಲ್ಲಿ ಹೋಗುವಾಗಲೆಲ್ಲಾ  ಈ ಗುಡ್ಡದ ಮೇಲೆ ಹತ್ತಿ, ನಿರ್ದಿಷ್ಟ ಸ್ಥಳವೊಂದನ್ನು ತಲುಪಿ, ಅಲ್ಲಿಂದ ಚಿತ್ರಗಳನ್ನು ಸೆರೆಹಿಡಿಯುವುದು ರೂಢಿ.  ಇದು ಹಲವಾರು ವರ್ಷಗಳಿಂದಲೂ ನಡೆದುಬಂದಿರುವ ಕ್ರಮ;  ನನ್ನೆಲ್ಲ ಛಾಯಾಗ್ರಹಣ ಸಹವರ್ತಿಗಳನ್ನೂ  ಇಲ್ಲಿ ಹತ್ತಿಸಿದ್ದೇನೆ.   ಇಲ್ಲಿಂದ ಕಾವೇರೀನದಿಯಾಚೆ ಭರಚುಕ್ಕಿಗೆ ಹೋಗುವ ರಸ್ತೆಯಲ್ಲಿ ಸಿಗುವ  ಮಧ್ಯರಂಗದ ದೇವಸ್ಥಾನವೂ, ಅದರ ಪಕ್ಕದಿಂದ ಪ್ರಾರಂಭವಾಗುವ- ನದಿಗೆ ಅಡ್ಡವಾಗಿ ನಿರ್ಮಿಸಿರುವ  ಒಡ್ಡೂ,  ಒಂದೇ ನೋಟಕ್ಕೆ ದಕ್ಕುತ್ತವೆ.  ಹಾಗಾಗಿ ನನಗದು  ಕಾಶೀ-ಪ್ರಯಾಗವೇ.          ಒಡ್ಡಿನಿಂದ ತಡೆಯಲ್ಪಟ್ಟಿರುವುದರಿಂದ ತುಂಬಿಕೊಂಡು ಘನಗಂಭೀರವಾಗಿ, ನಿಶ್ಚಲವಾಗಿ ಕಾಣುತ್ತಿರುವ  ಜಲರಾಶಿ,  ಅದರಲ್ಲಿ ನೀಲಾಕಾಶದ ಪ್ರತಿಬಿಂಬ  ಇವುಗಳು-  ಒಡ್ಡಿನ ಆಕೃತಿಯನ್ನೇ ಅನುಸರಿಸಿ ಸಾಗುತ್ತಾ ಈ ...

MYSOORU PALACE MAIN ENTRANCE.

Image
        ಮೈಸೂರು ಅರಮನೆ  ಮಹಾದ್ವಾರ.          ನಂಜನಗೂಡಿನಿಂದ  ನೇರವಾಗಿ ರಾಜಧಾನಿಗೇ ಎಂದು ಬಸ್ ಹತ್ತಿದ್ದವನು, ಮಾರ್ಗಮಧ್ಯೆ ಮೈಸೂರು ಅರಮನೆಯನ್ನು  ಹಾದುಹೋಗುತ್ತಿರುವಂತೆ ಈ ದೃಶ್ಯ ಕಂಡು ಧಿಢೀರನೆ ಮನಸ್ಸು ಬದಲಾಯಿಸಿ ಅಲ್ಲೇ ಇಳಿದುಬಿಟ್ಟೆ. ಜತೆಗೆ ತ್ರಿಪಾದವನ್ನೊಯ್ದಿರಲಿಲ್ಲ, ಹಾಗಾಗಿ ಅಲ್ಲಿದ್ದ ರಿಕ್ಷಾವೊಂದರ ಛಾವಣಿಯನ್ನೇ  ಆಧರಿಸಿ ಕ್ಯಾಮರಾವನ್ನಿಟ್ಟು ಕ್ಲಿಕ್ಕಿಸಿದ ಚಿತ್ರವಿದು. ಹಿಂದೆಲ್ಲ ಚಿತ್ರಿಸಿದ ಇದೇ  ದೃಶ್ಯವು  ಕತ್ತಲಾದ ಮೇಲೆ ತೆಗೆದಂಥವು, ಇದರಂತೆ ಸೂರ್ಯಾಸ್ತವನ್ನೂ ಸೇರಿಸಿದಂತೆ ದೀಪಾಲಂಕಾರವೂ ಸೇರಿಕೊಂಡು ವಿಶಿಷ್ಟವೆನ್ನಿಸುವಂತಿರಲಿಲ್ಲ.            ದೃಶ್ಯವಿಸ್ತಾರವನ್ನುಂಟುಮಾಡುವ ಉದ್ದೇಶದಿಂದ ಇಲ್ಲಿ ಬಲಗಡೆ ಕಾಣುವ ದೀಪಸ್ತಂಭವನ್ನು ಚೌಕಟ್ಟಿನೊಳಗೆ ಸೇರಿಸಿದ್ದೇನೆ. 

PROHIBITION

Image
        ನಿರ್ಬಂಧ.          ಕಳೆದ ವಾರ ಸೂಚಿಸಲ್ಪಟ್ಟ ಅದೇ ಸ್ಥಳದ ಉತ್ತರದ ತುದಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಹೋಗುವ ದಾರಿ ಸಾಗುತ್ತದೆ. ಈ ದಾರಿಯಲ್ಲಿ ಒಂದೆರಡು ಮಾರು ಹೋದರೆ ಅದೇ ಹಿನ್ನೀರಿನ ಪ್ರದೇಶ ಸಿಗುತ್ತದೆ. ಅಲ್ಲಿ ಈ ತಂತಿಗಳ ಬೇಲಿ ಹಾಕಲ್ಪಟ್ಟಿದೆ- ಹಿಂದಿನಿಂದಲೂ, ಸಹಜವಾಗಿ.  ಸೂರ್ಯಾಸ್ತವನ್ನು ಚಿತ್ರಿಸಲು ಹೋದವನಿಗೆ ಇದೇಕೋ ಆಕರ್ಷಕವೆನ್ನಿಸಿತು, ಸಂಗ್ರಹಿಸಿದೆ,   ಹೀಗೊಂದು ಮಾರ್ಪಾಡಿಗೆ ಮುಂದೆ ಇದು ದಾರಿಯಾಗಬಹುದೆಂದು ಎಂದೂ ಅನ್ನಿಸಿರಲಿಲ್ಲ.             ಪ್ರಶಾಂತವಾದ ಹಿನ್ನೀರು;  ಹಿನ್ನೆಲೆಯಲ್ಲಿ ಮುಳುಗುತ್ತಿರುವ ಸೂರ್ಯ, ರಾಗರಂಜಿತವಾದ ಆಗಸ- ಇವೆಲ್ಲವೂ ಸಂಧ್ಯೆಯ ಸಂಭ್ರಮವನ್ನು ಮನಸ್ಸಿಗೆ ಕಟ್ಟಿಕೊಡುವುದಾದರೂ  ಮುನ್ನೆಲೆಯಲ್ಲಿ ಕಾಣಬರುತ್ತಿರುವ ತಂತಿಬೇಲಿಯು ಇಡೀ ದೃಶ್ಯದ ಒಟ್ಟಂದವನ್ನು ಕ್ರೂರವಾಗಿ ಕೊಲ್ಲುತ್ತಿದೆ-   "ನೀವು ಈ ಆನಂದವನ್ನು ಆಸ್ವಾದಿಸುವಂತಿಲ್ಲ "  ಎಂಬರ್ಥದಲ್ಲಿ. ಅದಕ್ಕೆಂದೇ ಈ ಚಿತ್ರಕ್ಕೆ ನಿರ್ಬಂಧ ಎಂದು ಹೆಸರಿಸಿದ್ದು.   ಈ ವೈರುಧ್ಯದ, ನಿಷೇಧದ ಪ್ರಸ್ತಾಪ  ಮತ್ತು ನಿರೂಪಣೆ ಈಗೇಕೆ ಎಂಬುದು ಸದ್ಯೋವಿದ್ಯಮಾನಗಳನ್ನು ಬಲ್ಲವರಿಗೆ ಅರ್ಥವಾಗದಿರದು.          ತು...

PROTECTED HERITAGE MONUMENT.

Image
        ಸಂರಕ್ಷಿತ ಪ್ರಾಚೀನ ಸ್ಮಾರಕ -       ಈ ಚಿತ್ರದಲ್ಲಿ    ಕಾಣಬರುವ ಎತ್ತರವಾದ ಗೋಡೆಯಂತಹ ವಾಸ್ತುರಚನೆಯು  ಕ್ರಿ. ಶ. ೯ನೇ ಶತಮಾನದ್ದಾಗಿದೆ. ಪಲ್ಲವರ ರಾಜನಾಗಿದ್ದ  ರಾಜಮಾರ್ತಾಂಡನು ತನ್ನ ರಾಜ್ಯದ [ಈಗಿನ ಆಗ್ನೇಯ ಪಾಕಿಸ್ತಾನ]  ದಿಗ್ವಿಜಯದ ಕುರುಹಾಗಿ, ಮಹಿಷಪುರಿ ಪ್ರಾಂತ್ಯದ ಕನ್ನಂಬಾಡಿ ಎಂಬಲ್ಲಿ  ಒಂದು ಮಹಾಗೋಡೆಯನ್ನು ನಿರ್ಮಿಸಿದನು.  ಆ ಅಗಾಧವಾದ ಗೋಡೆಯ ಒಂದು  ಬದಿಗೆ ಆಗಾಗ ಸುರಿದ ಮಳೆನೀರೇ ಸೇರಿ ಸಂಗ್ರಹವಾಗಿ, ಒಂದು ಅಗಾಧವಾದ ಜಲರಾಶಿಯೇ ನಿರ್ಮಾಣವಾಯಿತು. ಆದರೆ, ದೊರೆ ರಾಜಮಾರ್ತಾಂಡನ ಕೀರ್ತಿಯನ್ನು ಸಹಿಸದ ಸ್ಥಳೀಯ ರಾಜನಾಗಿದ್ದ ದ್ವಾರಕಾಧೀಶವರ್ಮನು, ತನ್ನ ನಂಬುಗೆಯ ಶಿಲ್ಪಿಯಾಗಿದ್ದ ಕಾಶೀನಾಥಶರ್ಮನೆಂಬುವನ ಕಡೆಯಿಂದ ಈ ಗೋಡೆಗೆ ಅಲ್ಲಲ್ಲಿ ಕಿಂಡಿಗಳನ್ನೂ, ಸ್ವಯಂಚಾಲಿತ ಕವಾಟಗಳನ್ನೂ  ಅಳವಡಿಸಿದನು. ಅಲ್ಲಿನ ಜನಗಳು  ಈ ಸೌಕರ್ಯದಿಂದ ಅಲ್ಲಿ ಸಂಗ್ರಹವಾಗಿದ್ದ ನೀರನ್ನು ಬೇಕುಬೇಕಾದಾಗ ಬಳಸಿಕೊಂಡು  ಸುಖಶಾಂತಿಸಮೃದ್ಧಿಗಳಿಂದ ಇದ್ದರು.         ತನ್ನ ಮಹೋನ್ನತವಾದ ಆಶಯವು ಹೀಗೆ ವ್ಯತಿರಿಕ್ತವಾದುದನ್ನು ತಿಳಿದು ಕ್ರುದ್ಧನಾದ  ರಾಜಮಾರ್ತಾಂಡನು, ಆಗ ಉತ್ತರದೇಶಾಧಿಪತಿಯಾಗಿದ್ದ  ಮಹಮದ್ ಬಿನ್ ತುಘಲಕ್ ನ ಸಹಾಯವನ್ನು ಕೇಳಿ ಪಡೆದು ಅವನ  ಸೈ...

NEAR KARIGHATTA, BABURAYANAKOPPALU.

Image
   ಕರಿಘಟ್ಟದ ನೋಟ- ಕಾಶಿ ವಿಶ್ವೇಶ್ವರ ದೇವಸ್ಥಾನದ ಮುಂದಿನಿಂದ.                 ಮೈಸೂರು-ಬೆಂಗಳೂರು  ರಸ್ತೆಯ ಬಾಬುರಾಯನಕೊಪ್ಪಲಿನಲ್ಲಿ , ಊರ ಒಳತುದಿಯಲ್ಲಿ  ಕಾಶಿ ವಿಶ್ವೇಶ್ವರ ದೇವಸ್ಥಾನವಿದೆ. ಪುಟ್ಟ ದೇವಸ್ಥಾನದ  ಆ ಪರಿಸರ  ತುಂಬಾ ಪ್ರಶಾಂತವಾಗಿತ್ತು.  ಅಲ್ಲೇ ಮುಂದೆ ಒಂದು ಪ್ರಾಚೀನ ವಟವೃಕ್ಷ, ಪಕ್ಕದಲ್ಲಿ ನದಿಗೆ ಹೋಗುವುದಕ್ಕಾಗಿ  ಕಾಲುದಾರಿ  ಮತ್ತು  ಸುತ್ತಮುತ್ತ ಎಲ್ಲೆಲ್ಲೂ ಪಚ್ಚೆಹಸಿರು ಗದ್ದೆಗಳು -  ಈ ಎಲ್ಲವೂ ಸೇರಿ  ವಾರಾಂತ್ಯದ ಸಂಜೆಗಳನ್ನು ಕಳೆಯಲು ಹೇಳಿಮಾಡಿಸಿದ ತಾಣವಾಗಿತ್ತು.  ಹಿನ್ನೆಲೆಯಲ್ಲಿ ಕಾಣುತ್ತಿರುವ ಬೆಟ್ಟ ಕರಿಘಟ್ಟ. ಅದರ ಮೇಲಿನಿಂದ ನೋಡಿದರೂ ಈ ಪರಿಸರ ಅದ್ಭುತವಾಗಿ ಕಾಣುತ್ತಿತ್ತು. ಈ ಚಿತ್ರವನ್ನು ಸೆರೆಹಿಡಿದಾಗ ನನಗಿದ್ದ ಆಶಯವೂ ಅದೇ - ಬೆಟ್ಟದ ಮೇಲಿನ ದೇವರು ಎಂದರೆ ಅದು ಶ್ರೀನಿವಾಸನೇ , ಹಾಗೇ  ಅವನು ಭಕ್ತರ ಇಷ್ಟಾರ್ಥಗಳನ್ನೆಲ್ಲಾ  ಈಡೇರಿಸುವನು ಎಂಬ ನಂಬಿಕೆಯೂ ಜನಜನಿತವಾದ್ದರಿಂದ,  ಅದನ್ನೊಂದು ರೂಪಕವಾಗಿ ತೋರಿಸಲಿಕ್ಕಾಗಿ ಮೂರು ತೆಂಗಿನಮರಗಳನ್ನು ಮುನ್ನೆಲೆಯಲ್ಲಿಟ್ಟು  ಹಿಂದೆ ಬೆಟ್ಟವನ್ನು ಸಂಯೋಜಿಸಿದ್ದೆ-  ಶ್ರೀಭೂಸಮೇತ ಶ್ರೀನಿವಾಸನು  ಎಂಬ ಭಾವದಿಂದ.         ...

GREENS NEAR AMPHITHEATRE, MYSOORU.

Image
   ಬಯಲುರಂಗಮಂದಿರದ ಹಿಂದಿನ ಹಸಿರಹಾದಿ.            ಅಭಿವೃದ್ಧಿಯ ನೆಪದಲ್ಲಿ ವಿರೂಪಕ್ಕೊಳಗಾಗಿರುವ ಎರಡು ಸ್ಥಳಗಳ ಬಗ್ಗೆ ಇಲ್ಲಿ ಹೇಳುತ್ತಿದ್ದೇನೆ. ಈ ವಾರ ಒಂದು, ಮುಂದಿನವಾರ ಮತ್ತೊಂದು.                      ಮೈಸೂರಿನ ಮಾನಸಗಂಗೋತ್ರಿಯ ಬಯಲುರಂಗಮಂದಿರ ಮತ್ತಿತರ ಸ್ಥಳಗಳನ್ನು ಇತ್ತೀಚೆಗೆ  ಶತಮಾನೋತ್ಸವದ ಅಂಗವಾಗಿ ನವೀಕರಿಸಲಾಯಿತು.   ಸ್ವತಃ ರಾಷ್ಟ್ರಪತಿಗಳೇ ಬರುವವರಿದ್ದರಾಗಿ  [ವಿ ವಿ ಯ ಘಟಿಕೋತ್ಸವಕ್ಕೆ] ಈ ಬಯಲುರಂಗಮಂದಿರದ  ನವೀಕರಣವು, ಭದ್ರತೆಯ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿತು.  ಈ ಸಂಭ್ರಮಕ್ಕೆ ಇಲ್ಲಿ ಎಡಭಾಗದಲ್ಲಿರುವ ಬಡಪಾಯಿ ಮರಗಳು ತುತ್ತಾಗಬೇಕಾಯಿತು. "ವೈದೇಹೀಹರಣಂ ಜಟಾಯುಮರಣಂ " ಎಂಬ ಶ್ಲೋಕಭಾಗವನ್ನು,  "ಕಾಂಕ್ರೀಟೀಕರಣಂ ನಿಸರ್ಗಹನನಮ್ " ಎಂದು ಬದಲಿಸಿ ಮನನ  ಮಾಡಿಕೊಳ್ಳುವಂತೆ ಅದ್ಭುತವಾಗಿ ನಡೆಯಿತು.  ಇಲ್ಲಿಯವರೆಗೆ ಕೇವಲ ನನ್ನ ಗಣಕದ ಮುಖಪರದೆಯಲ್ಲಿ   ಇದ್ದು ನನಗೆ ಮಾತ್ರ ಸಂತೋಷಪ್ರದವಾಗಿದ್ದ ಈ ಚಿತ್ರವನ್ನು, ಈ ರೂಪಾಂತರದ ನಂತರ, ಮುಂದೆಂದೂ ಕಾಣಸಿಗದ  ನಶಿಸಿಹೋದ ಪ್ರಾಣಿಸಂಕುಲದಂತೆ  ಭಾವಿಸಿ, ಸಮಾನಮನಸ್ಕರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ  ಇಲ್ಲಿ ಟಂಕಿಸಿರುವ...

PRAYERS.

Image
       ಪ್ರಾರ್ಥನೆ !                                 ಸಾಮೂಹಿಕ ಪ್ರಾರ್ಥನೆ!

POOKOT LAKE.

Image
   ಪೂಕೋಟ್ ಕೆರೆ,  ವಯನಾಡು.                             ಕೇರಳದ ವಯನಾಡಿನ ವೈತ್ತಿರಿ ಯಲ್ಲಿ ಪೂಕೋಟ್ ಎಂಬ ಕೆರೆಯೊಂದಿದೆ.  ಊಟಿಯ ಸರೋವರಕ್ಕಿಂತ ಸ್ವಲ್ಪ ಚಿಕ್ಕದಾದ ಆದರೆ ತುಂಬಾ ಪ್ರಶಾಂತವಾದ, ಅಷ್ಟು ಜನಸಮ್ಮರ್ದವಿಲ್ಲದ  ಸುಂದರ ಜಲಾಕರವದು.  ಛಾಯಾಗ್ರಹಣವ್ಯಸನಿಗಳಿಗೆ. ಅತಿ ಪುಷ್ಕಳವಾದ ಗ್ರಾಸ ಇಲ್ಲಿಹುದು.          ಹಿಂದೆಲ್ಲಾ  ಸರೋವರವೆಂದರೆ ಹಂಸಗಳು ತೇಲುತ್ತಿರುವತೆ ನಮ್ಮ ಕಲ್ಪನೆಯಿತ್ತು.  ಈಗ ಹಾಗಿಲ್ಲ.  ನಮಗೆ ಸಿಗುವಷ್ಟರಲ್ಲೇ  ಹಂಸವೋ ಚಕ್ರವಾಕವೂ ಕಂಡುಕೊಳ್ಳಬೇಕು, ಕಲ್ಪಿಸಿಕೊಳ್ಳಬೇಕು. ಇಲ್ಲೂ ಹಾಗೆಯೇ.  ಇಡೀ ಪರಿಸರದಲ್ಲಿ ನೀಲಿ ಮತ್ತು ಹಸಿರಿನ ಸ್ವಯಿರವಿಹಾರ.  ಮಧ್ಯೆ  ನಮ್ಮ ದೃಷ್ಟಿಯನ್ನು ನೇರವಾಗಿ ಕೀಲಿಸಿಕೊಳ್ಳುವ  ಮಣ್ಣಿನ ಕಾಲುಹಾದಿ.  ಬಲಗಡೆ ದೋಣಿಗಳ ನಿಲ್ದಾಣ.  ನಿಶ್ಚಲ ಜಲರಾಶಿ. ಅದರಲ್ಲಿ ಪ್ರತಿಬಿಂಬ.  ಈ ಎಲ್ಲದರ ನಡುವೆ ಎಡಗಡೆ ಏರ್ಪಡುವ  ಅವಕಾಶದಲ್ಲಿ  ಬೆಳ್ಳಗಿನ ದೋಣಿಗಳು.  ನಮ್ಮ ಕಣ್ಣನ್ನು ಹಿಡಿದಿಟ್ಟುಕೊಳ್ಳುವ  ಮುಖ್ಯ ಧಾತುವೆಂದರೆ ಅದೇ.  

ON THE WAY TO THE TOP...

Image
   ಚಾಮುಂಡಿಬೆಟ್ಟದ ದಾರಿ...            ಚಾಮುಂಡಿಬೆಟ್ಟದ ಮೇಲಕ್ಕೆ ಹೋಗುವ ರಸ್ತೆ. ಬೆಟ್ಟದ ಮೇಲಿನಿಂದ ಇಳಿದುಬರುತ್ತಿದ್ದ ನನಗೆ ಕಂಡ ದೃಶ್ಯವಿದು.            ಬಸ್ಸೊಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಚಿತ್ರಧಾತುಗಳೂ ಸರಿಸುಮಾರು ಒಂದೇ ಜಾತಿಯ ವರ್ಣಪ್ರವರ್ಗದಲ್ಲಿದೆ.  ಹಾಗಾಗಿ  ಇಡೀ ವಾತಾವರಣಕ್ಕೆ  ಚಕಿತಗೊಳಿಸುವ ವಿಷಮವರ್ಣದ ವಸ್ತುವೊಂದನ್ನು ಹುಡುಕುತ್ತಿದ್ದೆ.  ಕೆಂಪು ವೋಲ್ವೋ ಬಸ್ಸಿನ ರೂಪದಲ್ಲಿ ಅದು ಸಾಕಾರವಾಯಿತು.  ಹಸಿರು, ಗಾಢನೀಲಿ ಬಣ್ಣಗಳ ಮೇಲಾಟದಲ್ಲಿ ಸತ್ವ ಕಳೆದುಕೊಂಡು ಮೂಲೆಗುಂಪಾಗಿದ್ದ ಕೆಂಪಿನ ಜಾತಿಯ ವರ್ಣಪ್ರವರ್ಗಕ್ಕೆ [ನೆಲದ ಮಣ್ಣಬಣ್ಣ ಪ್ರಬಲವಾಗಿಲ್ಲ!] ಚೈತನ್ಯವೀಯಲೋ ಎಂಬಂತೆ ನುಗ್ಗಿ ಬರುತ್ತಿರುವ ಬಸ್ಸಿನರೂಪದಲ್ಲಿ  ಕೆಂಪು ತನ್ನ ಅಸ್ತಿತ್ವವನ್ನು ಸ್ಥಾಪಿಸುತ್ತಿದೆ. ಕೆಂಪು ಆಕ್ರಮಣಕಾರಿ ವ್ಯಕ್ತಿತ್ವದ ಸಂಕೇತವೂ ಹೌದು.             ನಾಡ ಸ್ವಾತಂತ್ರ್ಯಸಂಗ್ರಾಮದಲ್ಲಿ ಹಲವು ನಾಯಕರು ತಮ್ಮ ತತ್ವಸಿದ್ಧಾಂತಗಳಲ್ಲಿ ಇಟ್ಟುಕೊಳ್ಳದ, ಆದರೆ ಅನಿವಾರ್ಯವಾಗಿದ್ದ ಕ್ಷಾತ್ರರಣತೇಜದ ಕುರುಹು ಆಗ ಸಂದಿಗ್ಧಕಾಲದಲ್ಲಿ ಮೂಡಿಬಂದ  ಒಬ್ಬರೇ ಒಬ್ಬ ನಾಯಕರ ರೂಪದಲ್ಲಿ  ಸಾಕಾರವಾಯಿತು. ಅವರೇ ನೇತಾಜಿ. ...

LINE OF BEGGERS.

Image
    ಸಾಲು ಭಿಕ್ಷುಕರು.            ನಗರದ  ವಾಣಿಜ್ಯಸಂಕೀರ್ಣವೊಂದರ ಆವರಣಗೋಡೆಯ ವಿನ್ಯಾಸವಿದು. ಒಳಗೆ ಬ್ಯಾಂಕೊಂದರ ಎಟಿಎಂ ಇದೆ. ಹಾಗಾಗಿ  ಅದರ ಸೂಚನಾಫಲಕವೂ ಮುಂದೆ ಇದೆ.  ಈ ಆವರಣಗೋಡೆಯ ವಿನ್ಯಾಸವನ್ನು ನೋಡಿ-  ಎರಡೂ ಕೈಗಳಲ್ಲಿ ಭಿಕ್ಷಾಪಾತ್ರೆಯನ್ನು ಎತ್ತಿ  ಹಿಡಿದು  ಸಾಲಾಗಿ ನಿಂತು ಅಂಗಲಾಚುತ್ತಿರುವಂತೆ ಕಾಣುವುದಿಲ್ಲವೇ? ಇದನ್ನೇ ಸಾಲು ಭಿಕ್ಷುಕರು ಎಂದು ಕರೆದದ್ದು.  ಹಿನ್ನೆಲೆಯೆಲ್ಲಿ ಕಾಣುವ ಎಟಿಎಂನ ಬೋರ್ಡು  ಈ  ಸಾಲಿಗೆ ಒಂದು ತಾಳಮೇಳವನ್ನೊದಗಿಸಿದೆ.           ನಗರವಾಸಿಗಳಾದ ನಾವೆಲ್ಲರೂ ಈ ಎಟಿಎಂ ಸೌಲಭ್ಯವನ್ನು ವಿಪರೀತ ಎನ್ನುವಷ್ಟು ಹಚ್ಚಿಕೊಂಡುಬಿಟ್ಟಿದ್ದೇವೆ.  ಹೆಚ್ಚಿನ ಹಣವನ್ನು ಇಂದಿಗೂ ಜತೆಗಿರಿಸಿಕೊಂಡಿರುವುದಿಲ್ಲ.  ಯಾವುದಾದರೂ ಎಟಿಎಂ ಇರುತ್ತಲ್ಲ? ಬೇಕಾದಾಗ ಹಣ ಪಡೆದುಕೊಂಡರಾಯಿತು ಎಂಬ ಧೋರಣೆ! ಆದರೆ ಇತ್ತೀಚಿಗೆ ವಿಚಿತ್ರವಾದ ಬಿಕ್ಕಟ್ಟೊಂದು ಏರ್ಪಟ್ಟಿತು.  ಬ್ಯಾಂಕುಗಳ ಮುಷ್ಕರ, ರಜಾದಿನಗಳು ಒಟ್ಟೊಟ್ಟಿಗೇ  ಬಂದವು, ಮೂರ್ನಾಲ್ಕು ದಿನಗಳು ಬ್ಯಾಂಕುಗಳು ಮುಚ್ಚಿದ್ದವು.  ಎಟಿಎಂಗಳಿಗೆ ಹಣದ ಮರುಪೂರಣದ ವ್ಯವಸ್ಥೆಯೂ ಆಗಲಿಲ್ಲ.  ಹಾಗಾಗಿ ಮೊದಲ ಒಂದೆರಡು ದಿನಗಳಲ್ಲೇ ಎಟಿಎಂಗಳಲ್ಲಿ ಹಣ ಮುಗಿದುಹೋಗಿ , ಜನರು ಪ...

DEBOORU.

Image
        ಮಳೆ ಬರುವ ಮುನ್ನ....          ನಂಜನಗೂಡಿನಿಂದ ಹುಲ್ಲಹಳ್ಳಿಗೆ ಹೋಗುವ ಮಾರ್ಗದಲ್ಲಿ  ಸ್ವಲ್ಪವೇ ದೂರದಲ್ಲಿ ದೇಬೂರು ಸಿಗುತ್ತದೆ.  ಊರಿನ ತಿರುವಿನಿಂದ ಬಲಕ್ಕೆ ಕಾಲುಹಾದಿಯಲ್ಲಿ ಸಾಗಿದರೆ  ಕಪಿಲಾನದೀತೀರಕ್ಕೆ ತಲುಪುತ್ತೇವೆ. ಅಲ್ಲೊಂದು ಜಲರೇಚಕಾಗಾರವಿದೆ. ಒಮ್ಮೆ ಇದೇ  ವರ್ಷಾಕಾಲದಲ್ಲಿ  ಬೆಳ್ಳಂಬೆಳಗ್ಗೆಯೇ  ಹೋಗಿ ಕಾದೆ, ಮೋಡಗಳು ಕವಿಯುವ ತನಕ.  ಹೀಗೊಂದು ದೃಶ್ಯ ಕಂಡಿತು.          ಎಕರೆಗಟ್ಟಲೆ ಹರಡಿರುವ ಸ್ಫುಟವಾದ ಕನ್ನಡಿಯಂತೆ ಕಾಣುವ ನಿಶ್ಚಲ ನದೀ ನೀರು [ಏಕೆಂದರೆ- ಮಳೆ ಕಳೆದ ವರ್ಷವೂ  ಸರಿಯಾಗಿ ಆಗಿರಲಿಲ್ಲ],  ಬೆಳಗ್ಗಿನ ಸಮಯದ ಎಳೆಬಿಸಿಲು ಇನ್ನೂ ಸ್ವಲ್ಪ ಮೋಡಗಳಿಂದ ಮುಚ್ಚದೇ  ಉಳಿದಿದೆ, ಬಹುತೇಕ ಆಕಾಶವು ಮೋಡಗಳಿಂದ ತುಂಬಿದೆ, ನೆಲದಲ್ಲಿ ಹಸಿರು ಪಸರಿಸಿ ಅಲ್ಲಲ್ಲಿ ಸಂತೃಪ್ತಿಯನ್ನು ಸೂಚಿಸುತ್ತಿದೆ   ಆದರೆ - ಅದೇ ಆಕಾಶಕ್ಕೆ ಚಾಚಿ ನಿಂತಿರುವ ಮರಗಳು  ಒಣಗಿಹೋಗಿ, ತಮಗೆ ಈ ಹಸಿರ ತೊಡುಗೆ ತೊಡಿಸುವಷ್ಟು  ಮಳೆಯನ್ನು   ತರಲಾರಿರಾ? ಎಂದು ಹೃದಯವಿದ್ರಾವಕವಾಗಿ ಈ ಮೋಡಗಳನ್ನು ಅಂಗಲಾಚುತ್ತಿರುವಂತಿದೆ.  ವೈರುಧ್ಯವನ್ನು ಬಿಚ್ಚಿಡುವ  ಕಾರಣದಿಂದ  ಈ ಚಿತ್ರವು  ನನ್ನ ಸಂಗ್ರಹ ಸೇರಿ...

SUNSET AT KUKKARAHALLI LAKE.

Image
ಪಾರಂಪರಿಕ ಮಂಟಪ.          ಕುಕ್ಕರಹಳ್ಳಿಕೆರೆಯಲ್ಲಿ ಪಾರಂಪರಿಕ ಎನ್ನಬಹುದಾದ ಮಂಟಪವೊಂದಿದೆ.  ಕೆಲವೇ ದಶಕಗಳ ಹಿಂದಿನ ರಚನೆ ಇದಾದರೂ ಇತ್ತೀಚೆಗಿನ  ಬೋಳುಬೋಳಾದ ಶೈಲಿಯ ರಚನೆಗಳಿಗಿಂತ ಎಷ್ಟೋ ಆಪ್ತವೆನಿಸುವುದು.  ವಾಸ್ತವದಲ್ಲಿ ಇದು ಜಲರೇಚಕಾಗಾರವಾಗಿತ್ತು.  ಈಗ  ಪಳೆಯುಳಿಕೆ ಮಾತ್ರವೇ.  ಚಿತ್ರಾಭ್ಯಾಸಿಗಳಿಗೆ  ಮೊಗೆದಷ್ಟೂ ಸಿಗುವ ಸಾಧ್ಯತೆಗಳ  ಖನಿ.          ಈ ಮಂಟಪವನ್ನು ಹಂದರದ ಮಧ್ಯೆ ಇರಿಸುವುದರ ಬದಲು  ಇಲ್ಲಿ ಪಕ್ಕಕ್ಕೆ ಯೋಜಿಸಿರುವುದು  ಸೂರ್ಯನನ್ನೂ  ಒಳಗೂಡಿಸಲು.  ಇದರಿಂದ ಈ ಮಂಟಪವು ಟಾರ್ಚ್ ಲೈಟ್ ನಿಂದ ದೀಪ್ತಗೊಳಿಸಿದಂತೆ  ಎದ್ದು ಕಾಣುತ್ತದೆ.  ಎರಡೂ ಚಿತ್ರಧಾತುಗಳನ್ನೂ ಪಕ್ಕಪಕ್ಕ ಯೋಜಿಸಿರುವುದು  ಪಿ ಕೆ ಎಫ್ ರಿಂದ ಕಲಿತ ಪಾಠ. ಬಹುಶಃ ಕದ್ದಿದ್ದು ಎಂದರೆ ಹೆಚ್ಚು ಸೂಕ್ತವಾದೀತು.  ಈ ಒಂದೇ ಒಂದು ಮಂಟಪವನ್ನಿಟ್ಟುಕೊಂಡು  ಹತ್ತು ಹಲವಾರು ದೃಶ್ಯಸಂಯೋಜನೆಗಳನ್ನು ಮಾಡಬಹುದು. 

ROAD TO ONAKE BETTA.

Image
ಒನಕೆ ಬೆಟ್ಟಕ್ಕೆ ದಾರಿ.          ಪಾಂಡವಪುರದಿಂದ ಮಂಡ್ಯಕ್ಕೆ ಸಾಗುವ ದಾರಿಯಲ್ಲಿ  ಚಿಕ್ಕಾಡೆಗೆ ಬಲಕ್ಕೆ ತಿರುಗುವ ಬದಲು ಅಲ್ಲೇ ಎಡಕ್ಕೆ ತಿರುಗಿದರೆ ಈ ರಸ್ತೆ ಸಿಗುತ್ತದೆ. ಇದು ಹೀಗೇ ಮುಂದುವರೆದು ಚಿತ್ರದಲ್ಲಿ ಕಾಣುತ್ತಿರುವ ಕಲ್ಲುಗುಡ್ಡಕ್ಕೆ[ಅದೇ  ಒನಕೆಬೆಟ್ಟ] ದಾರಿಯಾಗುತ್ತದೆ. ಕುಂತಿಬೆಟ್ಟದ ಪಕ್ಕದಲ್ಲೇ ಇರುವ ಇದು ಚಾರಣಪ್ರಿಯರ ನೆಚ್ಚಿನ ತಾಣವೂ ಹೌದು. ಲೋಕಪಾವನೀ ನದಿಯನ್ನು ಹುಡುಕುತ್ತಾ ಹೊರಟ ನನಗೆ ಮಧ್ಯೆ ಈ ದೃಶ್ಯ ಎದುರಾಗಿ ಕ್ಯಾಮರಾದಲ್ಲಿ ಸೆರೆಯಾಯಿತು.           ಕಪ್ಪಗೆ ಮಲಗಿರುವ ರಸ್ತೆಯು ಮುಂದೆ ಸಾಗುತ್ತಾ ನಮ್ಮ ನೋಟವನ್ನೂ ಕೀಲಿಸಿಕೊಂಡು ಬೆಟ್ಟದ ಕಡೆಗೆ ಒಯ್ಯುತ್ತದೆ. ಎಡ-ಬಲಗಳ ಹಚ್ಚಹಸಿರು ನಮ್ಮ ಕಣ್ಣಿಗೆ ತಂಪನ್ನುಂಟುಮಾಡುತ್ತದೆ. ಬಿಳಿಮೋಡಗಳಿಂದ ಕೂಡಿರುವ ನೀಲಾಗಸವು ಚಿತ್ರಕ್ಕೆ ಬೇಕಾದ ಹಿಂವ್ಯಾಪ್ತಿಯನ್ನೊದಗಿಸುತ್ತಾ, ಇತ್ತ  ಹಸಿರ ಸಾಮ್ರಾಜ್ಯದ ನಡುವೆ ತಲೆ ಎತ್ತಿರುವ  ಹೆಂಚಿನ ಕಟ್ಟಡಕ್ಕೆ ವೈರುಧ್ಯವನ್ನೂ ಉಂಟುಮಾಡುತ್ತಿದೆ. ಮುನ್ನೆಲೆಯಲ್ಲಿ ಕಾಣುತ್ತಿರುವ ಒಂಟಿಗಿಡವು ಚಿತ್ರಕ್ಕೆ ಆಳವನ್ನು [depth] ಕೊಡುತ್ತಾ, ತಾನು ಬಲಭಾಗದಲ್ಲಿರುವುದರಿಂದ  ಎಡಭಾಗದಲ್ಲಿರುವ ಬೆಟ್ಟಕ್ಕೆ ಸಮತೋಲನ ಸಾಧಿಸುವ ಧಾತುವಾಗಿಯೂ ವರ್ತಿಸುತ್ತದೆ. ಮೊತ್ತವಾಗಿ, ಒಬ್ಬ ಛಾಯಾಗ್ರಾಹಕ ನಿರೀಕ್ಷಿಸುವ ಎಲ್ಲ ವರ್ಣವಿಸ್ತಾರವೂ ಇಲ್ಲಿ ...

KODIBAYI KATTE AREA.

Image
ಕಾಲುವೆ-ಕಾಲುದಾರಿ.          ಕೆ. ಆರ್. ಎಸ್ ಪರಿಸರದಲ್ಲಿನ ವಿಶ್ವೇಶ್ವರಯ್ಯ ಕಾಲುವೆಯ ಪಕ್ಕದ ದಾರಿಯಲ್ಲೇ  ಸಾಗಿದರೆ, ಬಲಗಡೆ ತುಂಬುಹಸಿರು ನಮ್ಮ ಮನಸೂರೆಗೊಳ್ಳುತ್ತದೆ.  ಈ ದಾರಿ ಕಾಲುವೆಯ ಏರಿಯೂ ಹೌದಾದ್ದರಿಂದ  ಈ ಭಾಗಕ್ಕೆ  ಸ್ವಲ್ಪ ಎತ್ತರದಲ್ಲಿದೆ. ಹಾಗಾಗಿ, ಈ ಬಲಗಡೆಯ ಜಮೀನುಗಳೆಲ್ಲಾ ತಗ್ಗಿಗೆ ಬರುತ್ತವೆ. ಇಲ್ಲಿ ಕಾಣುತ್ತಿರುವ  ಕಾಲುದಾರಿ  ಕೋಡಿಬಾಯಿಕಟ್ಟೆಗೆ ಸಾಗುವುದು.  ಈ ಕೋಡಿಬಾಯಿಕಟ್ಟೆಯ ಕಾಲುದಾರಿ ಬಗ್ಗೆ, ಆದರ  ಅಕ್ಕಪಕ್ಕ ಸಿಗುವ ದೃಶ್ಯಗಳ ಬಗ್ಗೆ " ವಿಪ್ರೇಕ್ಷ್ಯ "ದಲ್ಲಿ ವಿವರವಾದ ಚಿತ್ರಮಾಲಿಕೆಯನ್ನೇ  ಹಿಂದೆ ಟಂಕಿಸಿರುವೆನು.  ಇಲ್ಲಿ  ಆ ಮಾರ್ಗದ ಒಂದು ಭಾಗವನ್ನು, ಅದೂ ದೂರದರ್ಶಿ ಲೆನ್ಸ್ ಗೆ  ದಕ್ಕಿದ್ದನ್ನು  ಪ್ರಸ್ತುತ ಪಡಿಸುತ್ತಿದ್ದೇನೆ.          ನನಗೆ ಟೆಲಿಫೋಟೋ ಲೆನ್ಸ್ ಗಳ  ಬಗ್ಗೆ  ತೀವ್ರವಾದ ಆಸಕ್ತಿಯಿದೆ.  ಒಂದಾನೊಂದು ದಿನ ಹೀಗೇ  ಅತಿ ಪ್ರಾಥಮಿಕವಾದ EF-S 55-250 IS ಲೆನ್ಸನ್ನು ಒಯ್ದಿದ್ದೆ. ಏರಿನ ಮೇಲಿರುವ ದಾರಿಯಿಂದ ನೋಡುವಾಗ  ಕೆಳಗೆ ಕಂಡ ನೋಟವೇ  ಈ ಚಿತ್ರ.  ಸುತ್ತಲಿನ ಹಸಿರಿನ ಮಧ್ಯೆ  ಅಂಕುಡೊಂಕಾಗಿ ಸಾಗುವ  ಕಿರುಗಾಲುವೆ, ಮತ್ತದರ ಸಾಂಗತ್ಯದಲ್ಲೇ ಸಾಗು...

FISHERMAN AT K. R. SAGARA.

Image
       ಹೊನ್ನೀರಿನಲ್ಲಿ  ಮೀನುಗಾರ.         ಕೆ.ಆರ್.ಎಸ್.ನ ಮುಖ್ಯರಸ್ತೆಯಲ್ಲಿನ  ಸೇತುವೆಯ ಮೇಲೆ  ನಿಂತರೆ  ಚೆಂದವಾದ  ಸೂರ್ಯೋದಯದ ದೃಶ್ಯಗಳು ಹೇರಳವಾಗಿ ಸಿಗುತ್ತವೆ.  ಒಂದಾನೊಂದು ದಿನ ಬೆಳ್ಳಂಬೆಳಗ್ಗೆ ಕ್ಯಾಮೆರಾವನ್ನು ಹೆಗಲಿಗೇರಿಸಿಕೊಂಡು ಓಡಿದೆ. ಉದಯಕ್ಕೆ ಮುನ್ನವೇ  ಅಲ್ಲಿ ತಲುಪಿ, ಕಾದು, ಹಲವಾರು ಚಿತ್ರಗಳನ್ನು  ತೆಗೆದೆ.  ಈ ಸಂದರ್ಭಕ್ಕೆ  ಇದೇ  ಪ್ರಶಸ್ತವೆಂದು  ಭಾವಿಸಿ  ಇಲ್ಲಿ ಟಂಕಿಸಿದ್ದೇನೆ.          ೭೦-೩೦೦ ಮಿ.ಮೀ  ದೂರದರ್ಶಿ ಮಸೂರವನ್ನು ಬಳಸಿ  ಸೆರೆಹಿಡಿದ  ದ್ರಶ್ಯವಿದು.   ಇಡೀ ನದೀಪಾತ್ರವೇ  ಅರುಣೋದಯದ ಹೊಂಬಣ್ಣದಲ್ಲಿ ಮುಳುಗಿರುವಾಗ   ಅದರ ಮಧ್ಯೆ ಮೀನುಗಾರನಿರುವಲ್ಲಿ  ಮಾತ್ರ ಸೂರ್ಯನ ಪ್ರತಿಬಿಂಬವಿದೆ. ಅವನೊಬ್ಬನ ಹಿನ್ನೆಲೆಯಲ್ಲಿ ಮಾತ್ರ  ವರ್ಣಭೇದವುಂಟಾಗಿದೆ, ಅದು ಈ ದೃಶ್ಯಕ್ಕೊಂದು  ಆಯಾಮವನ್ನು ನೀಡುತ್ತದೆ.  ಪಿ ಕೆ ಎಫ್ ಮುಂತಾದ ಕೆಲವು ಛಾಯಾಗ್ರಹಣಪ್ರವರರ ಪ್ರಕಾರ,  ಚಿತ್ರದಲ್ಲಿ  ಎಡಕ್ಕೆ ಮುಖ್ಯವಸ್ತುವನ್ನಿಟ್ಟರೆ   ಬಲಕ್ಕೆ  ಅದನ್ನು ಸರಿತೂಗಿಸಬಲ್ಲಂತಹಾ   ಪ್ರಮುಖ ಮತ್ತೊಂದು ವಿಷ...

NUGU BACKWATERS.

Image
      ನೆಲದಂಚು-ನೀರಂಚು.         ಹೆಚ್.ಡಿ.ಕೋಟೆ - ಬೇಗೂರು  ರಸ್ತೆಯಲ್ಲಿ ಬೀರ್ವಾಳು  ಎಂಬಲ್ಲಿ ನುಗು ಜಲಾಶಯವಿದೆ. ರಸ್ತೆಯ  ಬಲಕ್ಕೆ ಜಲಾಶಯದ ಹಿನ್ನೀರು, ಎಡಕ್ಕೆ  ಬೆಟ್ಟಗಳ ಸಾಲು.  ಆ ಬೆಟ್ಟಗಳ ಮೇಲೆ ಹತ್ತಿ ಅಲ್ಲಿಂದ ಕಾಣಬಹುದಾದ ದೃಶ್ಯವನ್ನು  ಸೆರೆಹಿಡಿಯುವ  ಮನೀಷೆ  ನನಗಿತ್ತು.  ಬೈಕನ್ನು  ರಸ್ತೆಯ ಪಕ್ಕಕ್ಕೆ ನಿಲ್ಲಿಸಿ, ಕಾಲುದಾರಿಯ ಮೂಲಕ  ಹತ್ತಿ ಏರಿದೆ. ಪುಣ್ಯಕ್ಕೆ ಯಾವ ಆನೆ ಇತ್ಯಾದಿಗಳೂ ಕಾಣಲಿಲ್ಲ.  ಮೇಲೆ ಹತ್ತಿ ಒಂದೆರಡು ಚಿತ್ರಗಳನ್ನು ತೆಗೆಯುವಷ್ಟರಲ್ಲಿ, ಕೆಳಗೆ  ರಸ್ತೆಯಲ್ಲಿ ಈ ಕಾರು ಬಂದು ನಿಂತಿತು. ಕುತೂಹಲಿಗಳೆಂದುಕೊಂಡು ಸುಮ್ಮನಾದೆ.  ಕಾರಿನ ಒಳಗಿಂದೊಬ್ಬ  ಕೈಯಾಡಿಸುತ್ತಿದ್ದಂತೆ ಸ್ವಲ್ಪ ಕಾಣಿಸಿತು.  ನನ್ನ ಕೆಲಸ  ಮುಂದುವರೆಸಿದೆ.  ನನ್ನ ಹಿಂದೆ ಏನೋ  ಸರಸರ ಶಬ್ದ: ನನಗೆ ಕಾರಿನವನ  ಕೈಸನ್ನೆ ನೋಡಿ  ನನ್ನ ಬೈಕಿನ ಬಗ್ಗೆ  ಏನಾಯಿತೋ ಎಂಬ ಆತಂಕ.  ದಡದಡನೆ  ಇಳಿದು ಬಂದೆ.  ಕಾರಿನವನು  ಆಶ್ಚರ್ಯದಿಂದ ಕೇಳಿದ  "ಸಾರ್, ಆನೆಯನ್ನ ಶೂಟ್ ಮಾಡಿದ್ರಾ?" ಎಂದು.   ನಾನು-  "ಇಲ್ಲಪ್ಪ,  ನಾನು ಅದಕ್ಕೆ ತಕ್ಕ ಲೆನ್ಸನ್ನು ಒಯ್ದಿರಲಿಲ್ಲ. ಹಾಗಾಗಿ ...

KUSUBOORU KERE.

Image
ಕುಸುಬೂರು ಕೆರೆ.          ಕುಶಾಲನಗರದಿಂದ ಸೋಮವಾರಪೇಟೆಗೆ ಹೋಗುವ ದಾರಿಯಲ್ಲಿ ಘಟ್ಟಪ್ರದೇಶದ ತಿರುವೊಂದರಲ್ಲಿ ಎಡಭಾಗಕ್ಕೆ  ಸುಂದರ ದೃಶ್ಯವೊಂದು ಹಠಾತ್ತನೆ ಅನಾವರಣಗೊಳ್ಳುತ್ತದೆ. ಕಾಫಿಎಸ್ಟೇಟಿನವರು ಬೆಟ್ಟದಿಂದಿಳಿವ ನೀರನ್ನು ತಡೆದು ನಿಲ್ಲಿಸಿ, ಒಂದು ಸಣ್ಣ ಕೆರೆಯನ್ನು ನಿರ್ಮಿಸಿಕೊಂಡಿದ್ದಾರೆ. ಫಾಲ್ಗುಣ-ವೈಶಾಖಗಳ ಹೊರತು ಅಲ್ಲಿ ನೀರು ಇದ್ದೇ  ಇರುತ್ತದೆ. ಈ ತಾಣವು ನನಗೆ ಪರಮಪ್ರಿಯವಾದ್ದರಿಂದ ಆಗಾಗ ಅತ್ತ ಕ್ಯಾಮರಾ ತಿರುಗಿಸುವುದು ರೂಢಿ.       ಈ ಸಂದರ್ಭದಲ್ಲಿ ನನ್ನ ಆಶಯವೇನಿದ್ದರೂ ಪ್ರತಿಬಿಂಬದ ಕಡೆಗೇ  ಆದರೂ, ಪೂರಕ ಅಂಶಗಳನ್ನೂ ಇಲ್ಲಿ ಸೇರಿಸಲೇಬೇಕೆಂಬುದು ನನ್ನ ವಾದವಾಗಿತ್ತು. ಮುನ್ನೆಲೆಯೆಲ್ಲಿ ಕಾಣುವ ಮಣ್ಣು-ಬಣ್ಣವು ಇಡೀ ಚಿತ್ರವನ್ನು ಆವರಿಸಿರುವ ಹಸಿರು-ನೀಲಿ ಬಣ್ಣಗಳ ಮೇಲಾಟವನ್ನು ತಗ್ಗಿಸುತ್ತದೆ.  ತೆಂಗಿನಮರಗಳ ಸಾಲು, ಈ ಪರಿಸರದ ಮಧ್ಯೆ ವಿಶಿಷ್ಟವಾದ ಅಸ್ಮಿತೆಯನ್ನುಂಟುಮಾಡುತ್ತಿದೆ- ತನ್ನ ಎತ್ತರದ ನಿಲುವಿನಿಂದ. [ಕೊಡಗಿನಲ್ಲಿ ತೆಂಗು ಸ್ವಲ್ಪ ಅಪರೂಪವೇ.]  ತನ್ನ ಮುಂದಿರುವ ಕೆರೆ ಇತ್ಯಾದಿಗಳಿಗೆ ತಮ್ಮ ಇರವಿನಿಂದಾಗಿ ಅಭಯವನ್ನುಂಟುಮಾಡುತ್ತಿರುವಂತಿವೆ.  ಇದು ವಾಸ್ತವವೂ ಹೌದು.   ತೆಂಗು ನೆಲೆದ ಸವಕಳಿಯನ್ನು ತಡೆಯುತ್ತದೆ ಎಂಬುದು ಸರ್ವವಿದಿತ.   

Just left Edukumari Station...

Image
ಎಡಕುಮರಿ ನಿಲ್ದಾಣದಿಂದ ಹೊರಟ ತಕ್ಷಣ .....         ಸಕಲೇಶಪುರದಿಂದ  ಸುಬ್ರಹ್ಮಣ್ಯರೋಡ್  ನಿಲ್ದಾಣದವರೆಗಿನ  ರೈಲುಪ್ರಯಾಣ  ಕಣ್ಣುಗಳಿಗೆ  ಹಬ್ಬವೇ ಸರಿ.   ಅಲ್ಲಿ ಎಡಕುಮರಿ ಸ್ಟೇಷನ್ ಕೂಡಾ  ದೃಶ್ಯಸಂಪತ್ತಿಗೆ  ಹೆಸರುವಾಸಿ.  ಅಲ್ಲಿಂದ ರೈಲು  ಹೊರಟ  ತಕ್ಷಣ  ಹಿಂದಿರುಗಿ , ರೈಲಿನಿಂದಾಚೆಗೆ  ತಿರುಗಿ  ಸೆರೆಹಿಡಿದ  ಚಿತ್ರವಿದು.           ಆಚೆ  ಕಾಣುವ ಸಕಲ ವರ್ಣವೈಷದ್ಯವೂ  ರೈಲಿನ ಮೇಲ್ಮೈ  ಮೇಲೆ ಪ್ರತಿಫಲಿತವಾಗಿರುವುದು  ಈ ಚಿತ್ರವನ್ನು ಅಂದಗಾಣಿಸಿವೆ.  ರೈಲ್ವೆ ಗಾರ್ಡ್  ನ  ಬಾವುಟ ಹಿಡಿದ  ಕೈ  ಮತ್ತು ದೂರವಾಗುತ್ತಿರುವ ನಿಲ್ದಾಣದ ಕಟ್ಟಡಗಳು  ರೈಲು  ಹೊರಟಿದೆ ಎಂದು ಸೂಚಿಸುತ್ತಿವೆ. 

About....

'ನವಿಲುಗರಿ' ಗಳನ್ನು  ನೋಡಹೋಗುವ  ಮುನ್ನ ...       ಇದು ಕೇವಲ ಒಂದೊಂದೇ ಚಿತ್ರವನ್ನು ಕುರಿತು ಬರೆಯಲ್ಪಟ್ಟ ಕಿರುಬರಹಗಳ ಗೊಂಚಲು .  ದಾರಿಯಲ್ಲಿ  ಹೋಗುತ್ತಿರುವಾಗ  ಅತ್ತಿತ್ತ  ಸೆರೆಸಿಕ್ಕ ಸಣ್ಣಪುಟ್ಟ  ಸಂಗತಿಗಳನ್ನು  ದೃಶ್ಯಗಳಾಗಿ  ವ್ಯಾಖ್ಯಾನಿಸುವ  ಪ್ರಯತ್ನಗಳು  ಹೀಗಿವೆ. ಇಡಿಯಾಗಿ  ಕಥಾರೂಪವಾಗಿ  ವಿವರಿಸಲ್ಪಟ್ಟ  ಪೋಸ್ಟುಗಳು   ' ವಿಪ್ರೇಕ್ಷ್ಯ'   ಬ್ಲಾಗಿನ ತಿರುಳಾದರೆ,  ಬಿಡಿಬಿಡಿಯಾಗಿ   ಕಂಡ  ಚಿತ್ರಗಳನ್ನು ಅವುಗಳ  ಹಿನ್ನೆಲೆಗಳನ್ನೂ  ಸಣ್ಣ  ವಿವರಣೆಯ ಸಹಿತವಾಗಿ  ಮಂಡಿಸುವುದು -  'ನವಿಲುಗರಿ' ಯ  ಉದ್ದೇಶ.       ಈ ವಿವರಣೆಗಳು ಚಿತ್ರಸೃಷ್ಟಿಯ ಕಲಾತ್ಮಕತೆಯ ಕುರಿತಾಗಿರಬಹುದು ಅಥವಾ ಆಯಾ ಸಂದರ್ಭದ ಹಿನ್ನೆಲೆಯಾಗಿರಬಹುದು ಮತ್ತದು  ಕೆಲವೊಮ್ಮೆ  ವಿಡಂಬನೆಯೂ  ಆಗಿರಬಹುದು.  ನೋಡುವ  ಸಂತೋಷ ನಿಮ್ಮದಾಗಲಿ.      ವಿಮರ್ಶೆ, ಟೀಕೆಗಳಿಗೆ ತುಂಬುಹೃದಯದ ಸ್ವಾಗತವಿದೆ.       ಬನ್ನಿ, ಒಳಗೆ ಹೋಗೋಣ.. ...