DEBATE FOR BATHING.
ಯಂಕ, ನಾಣ ಮತ್ತು ಸೀನ- ಸ್ನಾನೋಪಾಖ್ಯಾನ.
ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ಹೆದ್ದಾರಿಯಲ್ಲಿ ಕಾವೇರೀನದಿ ಸೇತುವೆಯ ಮೇಲಿನಿಂದ ಕ್ಲಿಕ್ಕಿಸಿದ ಸೂರ್ಯಾಸ್ತದ ದೃಶ್ಯವಿದು. ಸೂರ್ಯಾಸ್ತದ ಸೊಬಗಿಗಿಂತ ಇಲ್ಲಿ ಕಾಣುತ್ತಿರುವ ಮೂವರು ಮಿತ್ರರ ಮಾತುಕತೆಗಳು ನನಗೆ ಹೆಚ್ಚು ಆಸಕ್ತಿಯನ್ನುಂಟುಮಾಡಿದವು. ಅವರನ್ನು ಮಾತನಾಡಿಸಿ, ಕೇಳಿದಾಗ ತಿಳಿದುಬಂದದ್ದು ಇದು :-
ಜಲವಿಹಾರಕ್ಕೆಂದು ಮುಂಜಾನೆಯೇ ಬಂದವರಂತೆ[ಸ್ನಾನವೂ ಸೇರಿ], ಎಡದಿಂದ ಕ್ರಮವಾಗಿ ಅವರ ಹೆಸರುಗಳು ಯಂಕ, ನಾಣ ಮತ್ತು ಸೀನ ಎಂದಂತೆ. ಯಂಕನಿಗೆ ತಣ್ಣೀರು ಎಂದರೆ ಅಲರ್ಜಿ- ಹಾಗಾಗಿ ಏನೇ ಆಟವಾಡಿದರೂ ನೀರಿಗೆ ಮಾತ್ರ ಇಳಿಯುವುದಿಲ್ಲ ಎಂದು ಘೋಷಿಸಿದವನೇ ಸ್ನಾನವನ್ನೂ ಮಾಡದೇ ಬೆಳಗ್ಗಿನಿಂದ ಹಾಗೇ ಉಳಿದಿದ್ದಾನೆ. ನಾಣ ಅತಿ ಜಾಗರೂಕನಾದ್ದರಿಂದ ಬೆಳಗ್ಗೆ ಇಲ್ಲಿಗೆ ಬಂದ ತಕ್ಷಣವೇ ನೀರಿನಲ್ಲಿ ಮುಳುಗೆದ್ದು ಮಿಂದು ಆಗಿನಿಂದ ವಿಹಾರಪರನಾಗಿದ್ದಾನೆ. ಇನ್ನು ಸೀನನಾದರೋ, ಉಳಿದಿಬ್ಬರಿಗಿಂತ ಭಿನ್ನನಾದುದರಿಂದ ಸೂರ್ಯನ ತಾಪಕ್ಕೆ ನೀರು ಕಾಯಲಿ- ಆಮೇಲೆ ಮುಳುಗೆದ್ದು ಸ್ನಾನ ಮಾಡುವೆನು ಎಂದು ನಿಶ್ಚಯಿಸಿ ಮುಂಜಾನೆಯಿಂದ ಕಾಯುತ್ತ, ನಾಣನೊಂದಿಗೆ ವಾದಿಸುತ್ತಾ ಇರುವನು. ನಾಣ, ' ಇನ್ನೂ ಎಷ್ಟು ಹೊತ್ತು ಕಾಯುವಿಯೋ? ಸೂರ್ಯ ಮುಳುಗುತ್ತಿದ್ದಾನೆ ' ಎಂದದ್ದಕ್ಕೆ ' ಸೂರ್ಯನ ಪ್ರತಿಬಿಂಬವೇ ಕಾಣಬರುತ್ತಿದೆ, ಈಗಲಾದರೂ ನೀರು ಕಾಯಬಹುದು. ಸ್ವಲ್ಪ ಇರು' ಎಂದು ಉತ್ತರಿಸುತ್ತಿರುವನು.
ನನಗೆ ಹೊಳೆದ ಈ ಪ್ರಸಂಗದ ತಾತ್ಪರ್ಯವೇನೆಂದರೆ- ಮೂರು ಮನಸ್ಥಿತಿಯ ಜನರಿರುತ್ತಾರೆ, ಯಾವುದಾದರೊಂದು ಕೆಲಸವನ್ನು ಮಾಡಬೇಕಾಗಿ ಬಂದರೆ, ' ನಾನು ಮಾಡುವುದಿಲ್ಲ. ಮಾಡದೇ ಇರುವುದರಿಂದ ಏನು ಪ್ರತಿಕೂಲವಾದರೂ ಸಹಿಸುವೆನು' ಎನ್ನುವ ಯಂಕನ ತತ್ವದವರು, ಅವಕಾಶ ಸಿಕ್ಕಿದ ತಕ್ಷಣ ಕೆಲಸವನ್ನು ಮಾಡಿ ಮುಗಿಸುವ ಮನೋಭಾವದವರು ಹಾಗೂ ಯಾವಯಾವುದೋ ಅಸಂಬದ್ಧವಾದ ಕಾರಣಗಳನ್ನು ಮುಂದಿಟ್ಟುಕೊಂಡು, ಮಾಡಬೇಕಾದ ತುರ್ತು ಎದುರಾದರೂ ಮೂರ್ಖತನದಿಂದ ಕೆಲಸವನ್ನು ಮಾಡದೇ, ಅದೃಷ್ಟವನ್ನು ಮಾತ್ರಾ ನಂಬಿಕೊಂಡು ಕೊನೆಗೆ ಹಾಳಾಗುವವರು - ಹೀಗೆ. ನಾವು 'ನಾಣ' ರೇ ಆಗಿರೋಣ - ಯಾವಾಗಲೂ. ಏನೆನ್ನುತ್ತೀರಿ?

Comments
Post a Comment