FROM OVER JAVAGANAHALLI HILLOCK...

       ಜವಗನಹಳ್ಳಿ ಗುಡ್ಡದ ಮೇಲಿನಿಂದ.....  


        ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ಹೆದ್ದಾರಿಯಲ್ಲಿ  ಕಾವೇರೀ ನದಿಗುಂಟ  ಸಾಗುವಷ್ಟು  ಭಾಗದ  ಬಲಗಡೆ  ಸ್ವಲ್ಪ ಎತ್ತರವಾದ ಗುಡ್ಡಗಳ ಸಾಲು ಇದೆ,  ಜವಗನಹಳ್ಳಿ ಗುಡ್ಡ ಎಂದು  ಅದರ ಹೆಸರು.  ಆ ರಸ್ತೆಯಲ್ಲಿ ಹೋಗುವಾಗಲೆಲ್ಲಾ  ಈ ಗುಡ್ಡದ ಮೇಲೆ ಹತ್ತಿ, ನಿರ್ದಿಷ್ಟ ಸ್ಥಳವೊಂದನ್ನು ತಲುಪಿ, ಅಲ್ಲಿಂದ ಚಿತ್ರಗಳನ್ನು ಸೆರೆಹಿಡಿಯುವುದು ರೂಢಿ.  ಇದು ಹಲವಾರು ವರ್ಷಗಳಿಂದಲೂ ನಡೆದುಬಂದಿರುವ ಕ್ರಮ;  ನನ್ನೆಲ್ಲ ಛಾಯಾಗ್ರಹಣ ಸಹವರ್ತಿಗಳನ್ನೂ  ಇಲ್ಲಿ ಹತ್ತಿಸಿದ್ದೇನೆ.   ಇಲ್ಲಿಂದ ಕಾವೇರೀನದಿಯಾಚೆ ಭರಚುಕ್ಕಿಗೆ ಹೋಗುವ ರಸ್ತೆಯಲ್ಲಿ ಸಿಗುವ  ಮಧ್ಯರಂಗದ ದೇವಸ್ಥಾನವೂ, ಅದರ ಪಕ್ಕದಿಂದ ಪ್ರಾರಂಭವಾಗುವ- ನದಿಗೆ ಅಡ್ಡವಾಗಿ ನಿರ್ಮಿಸಿರುವ  ಒಡ್ಡೂ,  ಒಂದೇ ನೋಟಕ್ಕೆ ದಕ್ಕುತ್ತವೆ.  ಹಾಗಾಗಿ ನನಗದು  ಕಾಶೀ-ಪ್ರಯಾಗವೇ. 

        ಒಡ್ಡಿನಿಂದ ತಡೆಯಲ್ಪಟ್ಟಿರುವುದರಿಂದ ತುಂಬಿಕೊಂಡು ಘನಗಂಭೀರವಾಗಿ, ನಿಶ್ಚಲವಾಗಿ ಕಾಣುತ್ತಿರುವ  ಜಲರಾಶಿ,  ಅದರಲ್ಲಿ ನೀಲಾಕಾಶದ ಪ್ರತಿಬಿಂಬ  ಇವುಗಳು-  ಒಡ್ಡಿನ ಆಕೃತಿಯನ್ನೇ ಅನುಸರಿಸಿ ಸಾಗುತ್ತಾ ಈ  ದೃಶ್ಯಕ್ಕೊಂದು ಆಳವನ್ನುಂಟುಮಾಡುತ್ತದೆ.  ಸರ್ಪದಂತೆ ಸಾಗಿದ ಒಡ್ಡಿನ ರೇಖೆಯು ನಮ್ಮ ದೃಷ್ಟಿಪಥವನ್ನು ಕೀಲಿಸಿಕೊಂಡು  ಎದುರುದಡಕ್ಕೆ  ತಲುಪಿಸುತ್ತದೆ, ಅಲ್ಲೇನೋ ಇದೆಯಲ್ಲ-ನೋಡಬೇಕೆಂಬ ತುಡಿತವನ್ನುಂಟುಮಾಡುತ್ತದೆ.  ನದಿಯ ವಿಸ್ತಾರವನ್ನು ಗ್ರಹಿಸಬೇಕಾದರೆ  ಈ ಎತ್ತರಕ್ಕಾದರೂ ಏರಲೇಬೇಕಾದದ್ದು ಅನಿವಾರ್ಯ. [ ಇಲ್ಲೇನೂ ಆನೆ ಮತ್ತಿತರ ಪ್ರಾಣಿಗಳ ಭಯವಿಲ್ಲ!, ಜಾಲಿಮುಳ್ಳುಕಂಟಿಗಳು,  ಕೆಲವು ಹಾವುಗಳ ಆತಿಥ್ಯವಷ್ಟೇ.]

Comments