PORTRAITURE OF UNDERWORLD DONS.

ಪ್ರಸಿದ್ಧ ಖಳನಾಯಕರ  ವ್ಯಕ್ತಿಚಿತ್ರ... 




        ಕೆಲವು ದಶಕಗಳ ಹಿಂದೆ ಮುಂಬಯಿ ಭೂಗತಪ್ರಪಂಚದ  ನಾಯಕರು ಕೆಲವರು ಜನಜನಿತರಾಗಿದ್ದರು.  ಅವರುಗಳ ಸ್ವಭಾವ, ಕಾರ್ಯಶೈಲಿ, ಕಾಠಿಣ್ಯ ಹಾಗೂ ತಮ್ಮವರಲ್ಲಿ ಕರುಣೆ ಇತ್ಯಾದಿ ಸಂಗತಿಗಳು ಜನಸಾಮಾನ್ಯರಿಗೆ  ದಂತಕತೆಗಳಾಗಿದ್ದವು.  ಆ ಪ್ರಪಂಚದಲ್ಲಿಯೂ ಬದಲಾವಣೆಯ ಗಾಳಿ ಬೀಸಿತು,  ಹಾಲಿ[ಜಿ]ಗಳಾಗಿದ್ದವರು, ಜನರಿಗೆ ವರ[ಪ್ರ]ದರಾಗಿದ್ದವರು  ಕಾರ್ಯಕ್ಷೇತ್ರದಿಂದ ಹಾಗೂ ಜೀವನದಿಂದಲೂ  ಕೂಡಾ ನಿವೃತ್ತರಾದರು.  ಹೊಸದಾಗಿ ತಲೆಯೆತ್ತಿದವ  ತನ್ನ ಪೂರ್ವಸೂರಿಗಳಂತೆ  ತನ್ನ ವಲಯಗಳಲ್ಲಾದರೂ  ಸುಪ್ರಸಿದ್ಧನಾಗಲಿಲ್ಲ; ಪರಂತು ಸರ್ವಲೋಕಾಪಕಾರಿಯೇ ಆದ,  ಸರಸ್ಸನ್ನು ಹೊಕ್ಕ ಸುಯೋಧನನಂತೆ  ದೇಶಬಿಟ್ಟೋಡಿ  ದೂರದಿಂದಲೇ ವ್ಯವಹಾರ ನಡೆಸಿದ. 

        ಇರಲಿ,  ಪ್ರಸ್ತುತ  ಪ್ರಸಂಗಕ್ಕೆ ಬರೋಣ.  ಹಳೆಯ ಮನೆಯೊಂದನ್ನು ಕೆಡವಿ ಹೊಸತಾಗಿ ನಿರ್ಮಿಸುತ್ತಿದ್ದ  ಜಾಗವೊಂದು ಕಣ್ಣಿಗೆ ಬಿತ್ತು.  ಹಳೆಯ ಮನೆಯಿಂದ ತೆಗೆದ ಛಾವಣಿಯ ಪಕ್ಕಾಸು, ಹೆಂಚುಗಳನ್ನು  ಅಲ್ಲೇ ಪಕ್ಕದ ಗಲ್ಲಿಯಲ್ಲಿ ಜೋಡಿಸಿದ್ದರು. ಹಿನ್ನೆಲೆಯ  ಗೋಡೆಯೂ ಶಿಥಿಲವಾಗಿತ್ತು.  ಅಲ್ಲಿ ಮುಂದೆ ಒಂದೆರಡು ಚಿಮಣಿತಲೆಯುಳ್ಳ ಹೆಂಚುಗಳನ್ನು ಜೋಡಿಸಿದ್ದರು. ಹ್ಯಾಟನ್ನು ಹಾಕಿರುವ ತಲೆಗಳಂತೆ ಇವು ಕಂಡವು. ಇದನ್ನು ನೋಡಿದಾಗ ಮೇಲ್ಕಾಣಿಸಿದ ವ್ಯಕ್ತಿಗಳೂ ಅವರ ಕಥೆಗಳೂ  ನೆನಪಾದವು. ಕಥೆ-ಕಾದಂಬರಿಗಳಲ್ಲಿ  ಬರುವ ವರ್ಣನೆ:  ಖಳನು, ತಲೆಗೆ ಹ್ಯಾಟನ್ನು ಹಾಕಿದ್ದನು. ಮುಖಮುಚ್ಚುವಂತೆ ಮುಸುಕು ಹಾಕಿದ್ದನು.  ಕಣ್ಣಿಗೆ ಕಪ್ಪುಕನ್ನಡಕವನ್ನು ಹಾಕಿದ್ದನು..... ಹೀಗೇ  ಮುಂದುವರೆಯುತ್ತದೆ.  ಇಲ್ಲಿ  ಈ ಚಿಮಣಿಗೋಪುರಗಳನ್ನುಳ್ಳ   ಮೂರು ಹೆಂಚುಗಳು  ಆ ಮೂವರು ಖಳನಾಯಕರನ್ನು ನೆನಪಿಸುತ್ತವೆ. ತಂತಿ ಬಿಗಿದಿರುವ  ಆ ಕಿಂಡಿಗಳು, ಮನುಷ್ಯರ ಕಣ್ಣುಗಳು ಇರಬೇಕಾದಲ್ಲಿ ಇದ್ದು,  ಅವುಗಳೊಳಗಿಂದ ಕಾಣಬರುವ ನೆರಳು-ಬೆಳಕು  ಅವರ ಸ್ವಭಾವಗಳ ಆಭಾಸಗಳನ್ನು ಪ್ರತಿಬಿಂಬಿಸುತ್ತವೆ.  ಇವುಗಳಿರುವ ಜಾಗ ಮತ್ತು ಹಿನ್ನೆಲೆ- ಈಗ ಇಂಥವರು  ಅಪ್ರಸ್ತುತರಾಗಿದ್ದಾರೆ ಎಂದು ತೋರಿಸುತ್ತದೆ.  ಸುಯೋಧನನೆಂದೆ ಅಲ್ಲವೇ?  ಚಿತ್ರದಲ್ಲಿ ಬಲಗಡೆ ಕೆಳಗೆ ಕಾಣುವ ಮೂರನೆಯವನು ಅವನೇ-  ಹಿರಿಯರ ಕಾಲದಲ್ಲಿ ಇನ್ನೂ ವರ್ಧಿಷ್ಣುವಾಗಿದ್ದ;  ಆಮೇಲೆ ಕೆಟ್ಟದಾಗಿ ಬೆಳೆದ. 
      
        ಈಗ ಅವರುಗಳು ಏಕೆ ಅಪ್ರಸ್ತುತರಾಗಿದ್ದಾರೆ ? ಎಂದರೆ  ಈಗ ಅವರುಗಳ ಸ್ಥಾನಮಾನಗಳನ್ನು  ರಾಜಕಾರಣಿಗಳೇ ಅತಿಸಮರ್ಥವಾಗಿ  ತುಂಬಿದ್ದಾರಾದ್ದರಿಂದ.  [ ವಿ.ಸೂ.- ಇಲ್ಲಿ ಅವರುಗಳ ಎಂದರೆ ದೇಶಬಿಟ್ಟ ದುರ್ಯೋಧನ ಮತ್ತವನಂಥವರು ಮಾತ್ರ ಎಂದರ್ಥ; ಖಂಡಿತವಾಗಿ  ಹಿಂದಿದ್ದ ಈರ್ವರಲ್ಲ. ರಾಜಕಾರಣಿಗಳೊಂದಿಗೆ ಸಮೀಕರಿಸಿದ್ದು ಗೊತ್ತಾದರೆ ಅವರಿಬ್ಬರ ಆತ್ಮಗಳು ನಮ್ಮ ಮೇಲೆ ಪರಲೋಕದಿಂದಲೇ ಮಾನನಷ್ಟ ಮೊಕದ್ದಮೆ ಹೂಡಬಹುದು!] 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....