NUGU BACKWATERS.
ನೆಲದಂಚು-ನೀರಂಚು. ಹೆಚ್.ಡಿ.ಕೋಟೆ - ಬೇಗೂರು ರಸ್ತೆಯಲ್ಲಿ ಬೀರ್ವಾಳು ಎಂಬಲ್ಲಿ ನುಗು ಜಲಾಶಯವಿದೆ. ರಸ್ತೆಯ ಬಲಕ್ಕೆ ಜಲಾಶಯದ ಹಿನ್ನೀರು, ಎಡಕ್ಕೆ ಬೆಟ್ಟಗಳ ಸಾಲು. ಆ ಬೆಟ್ಟಗಳ ಮೇಲೆ ಹತ್ತಿ ಅಲ್ಲಿಂದ ಕಾಣಬಹುದಾದ ದೃಶ್ಯವನ್ನು ಸೆರೆಹಿಡಿಯುವ ಮನೀಷೆ ನನಗಿತ್ತು. ಬೈಕನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ, ಕಾಲುದಾರಿಯ ಮೂಲಕ ಹತ್ತಿ ಏರಿದೆ. ಪುಣ್ಯಕ್ಕೆ ಯಾವ ಆನೆ ಇತ್ಯಾದಿಗಳೂ ಕಾಣಲಿಲ್ಲ. ಮೇಲೆ ಹತ್ತಿ ಒಂದೆರಡು ಚಿತ್ರಗಳನ್ನು ತೆಗೆಯುವಷ್ಟರಲ್ಲಿ, ಕೆಳಗೆ ರಸ್ತೆಯಲ್ಲಿ ಈ ಕಾರು ಬಂದು ನಿಂತಿತು. ಕುತೂಹಲಿಗಳೆಂದುಕೊಂಡು ಸುಮ್ಮನಾದೆ. ಕಾರಿನ ಒಳಗಿಂದೊಬ್ಬ ಕೈಯಾಡಿಸುತ್ತಿದ್ದಂತೆ ಸ್ವಲ್ಪ ಕಾಣಿಸಿತು. ನನ್ನ ಕೆಲಸ ಮುಂದುವರೆಸಿದೆ. ನನ್ನ ಹಿಂದೆ ಏನೋ ಸರಸರ ಶಬ್ದ: ನನಗೆ ಕಾರಿನವನ ಕೈಸನ್ನೆ ನೋಡಿ ನನ್ನ ಬೈಕಿನ ಬಗ್ಗೆ ಏನಾಯಿತೋ ಎಂಬ ಆತಂಕ. ದಡದಡನೆ ಇಳಿದು ಬಂದೆ. ಕಾರಿನವನು ಆಶ್ಚರ್ಯದಿಂದ ಕೇಳಿದ "ಸಾರ್, ಆನೆಯನ್ನ ಶೂಟ್ ಮಾಡಿದ್ರಾ?" ಎಂದು. ನಾನು- "ಇಲ್ಲಪ್ಪ, ನಾನು ಅದಕ್ಕೆ ತಕ್ಕ ಲೆನ್ಸನ್ನು ಒಯ್ದಿರಲಿಲ್ಲ. ಹಾಗಾಗಿ ...