NEAR KARIGHATTA, BABURAYANAKOPPALU.

  ಕರಿಘಟ್ಟದ ನೋಟ- ಕಾಶಿ ವಿಶ್ವೇಶ್ವರ ದೇವಸ್ಥಾನದ ಮುಂದಿನಿಂದ.  

     


        ಮೈಸೂರು-ಬೆಂಗಳೂರು  ರಸ್ತೆಯ ಬಾಬುರಾಯನಕೊಪ್ಪಲಿನಲ್ಲಿ , ಊರ ಒಳತುದಿಯಲ್ಲಿ  ಕಾಶಿ ವಿಶ್ವೇಶ್ವರ ದೇವಸ್ಥಾನವಿದೆ. ಪುಟ್ಟ ದೇವಸ್ಥಾನದ  ಆ ಪರಿಸರ  ತುಂಬಾ ಪ್ರಶಾಂತವಾಗಿತ್ತು.  ಅಲ್ಲೇ ಮುಂದೆ ಒಂದು ಪ್ರಾಚೀನ ವಟವೃಕ್ಷ, ಪಕ್ಕದಲ್ಲಿ ನದಿಗೆ ಹೋಗುವುದಕ್ಕಾಗಿ  ಕಾಲುದಾರಿ  ಮತ್ತು  ಸುತ್ತಮುತ್ತ ಎಲ್ಲೆಲ್ಲೂ ಪಚ್ಚೆಹಸಿರು ಗದ್ದೆಗಳು -  ಈ ಎಲ್ಲವೂ ಸೇರಿ  ವಾರಾಂತ್ಯದ ಸಂಜೆಗಳನ್ನು ಕಳೆಯಲು ಹೇಳಿಮಾಡಿಸಿದ ತಾಣವಾಗಿತ್ತು.  ಹಿನ್ನೆಲೆಯಲ್ಲಿ ಕಾಣುತ್ತಿರುವ ಬೆಟ್ಟ ಕರಿಘಟ್ಟ. ಅದರ ಮೇಲಿನಿಂದ ನೋಡಿದರೂ ಈ ಪರಿಸರ ಅದ್ಭುತವಾಗಿ ಕಾಣುತ್ತಿತ್ತು. ಈ ಚಿತ್ರವನ್ನು ಸೆರೆಹಿಡಿದಾಗ ನನಗಿದ್ದ ಆಶಯವೂ ಅದೇ -
ಬೆಟ್ಟದ ಮೇಲಿನ ದೇವರು ಎಂದರೆ ಅದು ಶ್ರೀನಿವಾಸನೇ , ಹಾಗೇ  ಅವನು ಭಕ್ತರ ಇಷ್ಟಾರ್ಥಗಳನ್ನೆಲ್ಲಾ  ಈಡೇರಿಸುವನು ಎಂಬ ನಂಬಿಕೆಯೂ ಜನಜನಿತವಾದ್ದರಿಂದ,  ಅದನ್ನೊಂದು ರೂಪಕವಾಗಿ ತೋರಿಸಲಿಕ್ಕಾಗಿ ಮೂರು ತೆಂಗಿನಮರಗಳನ್ನು ಮುನ್ನೆಲೆಯಲ್ಲಿಟ್ಟು  ಹಿಂದೆ ಬೆಟ್ಟವನ್ನು ಸಂಯೋಜಿಸಿದ್ದೆ-  ಶ್ರೀಭೂಸಮೇತ ಶ್ರೀನಿವಾಸನು  ಎಂಬ ಭಾವದಿಂದ. 

        ಈಗ ಇಲ್ಲಿ ಅರ್ಥವಿಕಲ್ಪ ಮಾಡುತ್ತಿದ್ದೇನೆ-  ನಮ್ಮ ಆಗ್ನೇಯಕ್ಕಿರುವ ಪ್ರಾಂತ್ಯವೊಂದರ  ಕೆಲಜನರು  ಇಲ್ಲಿ ವಿಸ್ತಾರವಾದ  ಹಾಗೂ ಸೌಕರ್ಯಗಳಿಂದ ಕೂಡಿದ  ಮತ್ತೊಂದು ದೇವಸ್ಥಾನವೊಂದನ್ನು ಕಟ್ಟುತ್ತಿದ್ದಾರೆ.  ದೇವಾಲಯಗಳ ನಿರ್ಮಾಣ ಆಕ್ಷೇಪಾರ್ಹವಲ್ಲ ಪರಂತು, ಆ ಪರಿಸರಕ್ಕೆ ಹೊಂದದ ವಾಸ್ತುರಚನೆ, ಹಾಗೂ ಅಲ್ಲಿಗೆ ಅನಿವಾರ್ಯವಲ್ಲದ  ಅಸ್ತಿತ್ವ ಇವುಗಳು ಮನಸ್ಸಿಗೆ ತೀರಲಾರದ  ಬಾಧೆ ಕೊಡುತ್ತವೆ. ಹಾಗಾಗಿ ಈ ಚಿತ್ರವು ಈ ದೃಷ್ಟಿಯಿಂದ ಅಪೂರ್ವವಾದದ್ದು- ಮತ್ತೆ ಹೀಗೆ ಕಾಣಸಿಗದಂತಹದ್ದು. ಇಲ್ಲೆಲ್ಲಾ ಕಟ್ಟಡಗಳು ಎದ್ದಿವೆ. 
        
       ಕಳೆದ ವಾರದ ಬರಹದ ಉತ್ತರಾರ್ಧವಿದು. ಸಂಕಟದ ಉತ್ತರಾರ್ಧ ಎಂದಾಗುವುದೋ?

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....