PROTECTED HERITAGE MONUMENT.
ಸಂರಕ್ಷಿತ ಪ್ರಾಚೀನ ಸ್ಮಾರಕ -
ಈ ಚಿತ್ರದಲ್ಲಿ ಕಾಣಬರುವ ಎತ್ತರವಾದ ಗೋಡೆಯಂತಹ ವಾಸ್ತುರಚನೆಯು ಕ್ರಿ. ಶ. ೯ನೇ ಶತಮಾನದ್ದಾಗಿದೆ. ಪಲ್ಲವರ ರಾಜನಾಗಿದ್ದ ರಾಜಮಾರ್ತಾಂಡನು ತನ್ನ ರಾಜ್ಯದ [ಈಗಿನ ಆಗ್ನೇಯ ಪಾಕಿಸ್ತಾನ] ದಿಗ್ವಿಜಯದ ಕುರುಹಾಗಿ, ಮಹಿಷಪುರಿ ಪ್ರಾಂತ್ಯದ ಕನ್ನಂಬಾಡಿ ಎಂಬಲ್ಲಿ ಒಂದು ಮಹಾಗೋಡೆಯನ್ನು ನಿರ್ಮಿಸಿದನು. ಆ ಅಗಾಧವಾದ ಗೋಡೆಯ ಒಂದು ಬದಿಗೆ ಆಗಾಗ ಸುರಿದ ಮಳೆನೀರೇ ಸೇರಿ ಸಂಗ್ರಹವಾಗಿ, ಒಂದು ಅಗಾಧವಾದ ಜಲರಾಶಿಯೇ ನಿರ್ಮಾಣವಾಯಿತು.
ಆದರೆ, ದೊರೆ ರಾಜಮಾರ್ತಾಂಡನ ಕೀರ್ತಿಯನ್ನು ಸಹಿಸದ ಸ್ಥಳೀಯ ರಾಜನಾಗಿದ್ದ ದ್ವಾರಕಾಧೀಶವರ್ಮನು, ತನ್ನ ನಂಬುಗೆಯ ಶಿಲ್ಪಿಯಾಗಿದ್ದ ಕಾಶೀನಾಥಶರ್ಮನೆಂಬುವನ ಕಡೆಯಿಂದ ಈ ಗೋಡೆಗೆ ಅಲ್ಲಲ್ಲಿ ಕಿಂಡಿಗಳನ್ನೂ, ಸ್ವಯಂಚಾಲಿತ ಕವಾಟಗಳನ್ನೂ ಅಳವಡಿಸಿದನು. ಅಲ್ಲಿನ ಜನಗಳು ಈ ಸೌಕರ್ಯದಿಂದ ಅಲ್ಲಿ ಸಂಗ್ರಹವಾಗಿದ್ದ ನೀರನ್ನು ಬೇಕುಬೇಕಾದಾಗ ಬಳಸಿಕೊಂಡು ಸುಖಶಾಂತಿಸಮೃದ್ಧಿಗಳಿಂದ ಇದ್ದರು.
ತನ್ನ ಮಹೋನ್ನತವಾದ ಆಶಯವು ಹೀಗೆ ವ್ಯತಿರಿಕ್ತವಾದುದನ್ನು ತಿಳಿದು ಕ್ರುದ್ಧನಾದ ರಾಜಮಾರ್ತಾಂಡನು, ಆಗ ಉತ್ತರದೇಶಾಧಿಪತಿಯಾಗಿದ್ದ ಮಹಮದ್ ಬಿನ್ ತುಘಲಕ್ ನ ಸಹಾಯವನ್ನು ಕೇಳಿ ಪಡೆದು ಅವನ ಸೈನ್ಯದೊಂದಿಗೆ ದ್ವಾರಕಾಧೀಶವರ್ಮನ ಮೇಲೆ ದಂಡೆತ್ತಿಬಂದು, ಈ ಗೋಡೆಯನ್ನು ತನ್ನ ಕೈವಶಮಾಡಿಕೊಂಡನು. ಹಾಗೂ ಸ್ಥಳೀಯ ಜನರನ್ನು ತಡೆಯಲು ಆ ಸೈನಿಕರನ್ನು ನೇಮಿಸಿದನು. ಇದರಿಂದಾಗಿ ಆ ಸ್ಥಳೀಯ ಜನಗಳಿಗೆ ಈ ಅಗಾಧವಾದ ಜಲರಾಶಿಯ ಪ್ರಯೋಜನವಾಗದೇ ಅವರು ನಷ್ಟಹೊಂದಿದರು. ಆ ಜಲರಾಶಿಯೂ ಅಲ್ಲಿ ನಿಲ್ಲದೆ ಹರಿದುಹೋಗಿ, ನೆಲ ಬೆಂಗಾಡಾಯಿತು. ಹೀಗೆ ರಾಜಮಾರ್ತಾಂಡನು ತನ್ನ ಆಶಯವನ್ನು ಈಡೇರಿಸಿಕೊಂಡನು. ಈ ಇತಿಹಾಸವನ್ನು ನಮಗೆ ನೆನಪಿಸುತ್ತಾ ಈಗಲೂ ಮೂಕಸಾಕ್ಷಿಯಾಗಿ ನಿಂತಿದೆ - ಈ ಮಹಾಗೋಡೆ.
ದೊರೆಯಾದ ರಾಜಮಾರ್ತಾಂಡನ ಶೌರ್ಯಗಾಥೆಯನ್ನು ನಾವೆಲ್ಲರೂ ಮೆಚ್ಚಿ ತಲೆದೂಗಬೇಕಲ್ಲವೇ?

Comments
Post a Comment