Posts

Showing posts from 2017

SILHOUETTING THE HERITAGE LAMP-POST.

Image
       ಪಾರಂಪರಿಕ ದೀಪಸ್ತಂಭ...           ಮೈಸೂರು ಅರಮನೆಯ ಆವರಣದಲ್ಲಿರುವ ಅಲಂಕಾರಿಕವಾದ ದೀಪಸ್ತ೦ಭಗಳಲ್ಲೊಂದು ಇದು.  ಅಪರಾಹ್ನ ನಾಲ್ಕೂವರೆಯ ಸುಮಾರಿಗೆ  ಈ ಕಂಬದ ಹಿಂದೆ ಸೂರ್ಯನ ಬಿಂಬವಿತ್ತು.  ಸಾಕಷ್ಟು ಮೋಡಗಳೂ ಸುತ್ತಮುತ್ತ ಜಮಾವಣೆಗೊಂಡದ್ದರಿಂದ  ಸ್ವಲ್ಪ ರೋಚಕವಾಗಿ ಕಂಡಿತು.  ಈ ನೋಟವನ್ನು ಮತ್ತಷ್ಟು ಅದ್ಭುತಗೊಳಿಸಲು  ನನ್ನ ಕ್ಯಾಮರಾದ  ಬೆಳಕಿನ ವರ್ಣನಿರ್ಣಯಸೌಕರ್ಯವನ್ನು  ಪಲ್ಲಟಗೊಳಿಸಿ,  ಕ್ಲಿಕ್ಕಿಸಿ, ಹಾಗೆ ಬಂದ  ಚಿತ್ರವನ್ನು ಆಕರವಾಗಿ ಬಳಸುವಂತೆ ಕ್ಯಾಮರಾಕ್ಕೆ  ನಿರ್ದೇಶಿಸಿ, ಪುನಃ ಕ್ಲಿಕ್ಕಿಸಿದೆ.  ಮೋಡಗಳ ಬಣ್ಣದಲ್ಲಿ ವಿಶಿಷ್ಟವಾದ ನೀಲಿಛಾಯೆಯೂ, ಆಕಾಶದಲ್ಲಿ ಜ್ವಾಲೆಯಂತಹ ಹಳದೀಬಣ್ಣವೂ ಪ್ರಾಪ್ತವಾಯಿತು.  ಚೌಕಟ್ಟಿನ ಬಲಗಡೆ ಎತ್ತರದಲ್ಲಿ ಈ ವಿಲಾಸವಾದರೆ  ಎಡಕ್ಕೆ ಸ್ವಲ್ಪ ಕೆಳಭಾಗದಲ್ಲಿ  ಈ ದೀಪಸ್ತ೦ಭವನ್ನು  ಯೋಜಿಸಿಕೊಂಡೆ-  ಇಡೀ ಚೌಕಟ್ಟಿಗೊಂದು ಸಮತೋಲನವನ್ನುಂಟುಮಾಡಲು.. 

WILD FLOWERS...

Image
    ಹಳೆಯ ಮನೆಯೊಂದರ ಮೇಲೆ...          ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಮನೆಯೊಂದರ ಛಾವಣಿಯ ಬಿರುಕು-ಸಂದುಗಳಲ್ಲಿ  ಬೆಳೆದಿದ್ದ ತುಂಬೆಗಿಡವಿದು. ಸರಿಯಾಗಿ ಅದರ ಹಿಂದೆ ತೆಂಗಿನ ಗರಿಯೊಂದು ಹಿನ್ನೆಲೆಯಾಗುವಂತೆ ಗುರಿಮಾಡಿಕೊಂಡು,  ಚಿತ್ರಿಸಿದ ದೃಶ್ಯವಿದು. ಸೂರ್ಯನೂ ಈ ಗರಿಯ ಮೇಲ್ಭಾಗದಲ್ಲೇ ಇದ್ದದ್ದರಿಂದ ನನ್ನ ಆಶಯವು ಮತ್ತಷ್ಟು ಕಳೆಗಟ್ಟಿತು- ಈ ತುಂಬೆ ಗಿಡದ ಚಿತ್ರವು  ಸಂಪೂರ್ಣವಾಗಿ ಹಿಂದೀಪ್ತವಾಗುವುದರ ಮೂಲಕ. 

RAJENDRAVIHAR PALACE SHOT FROM ZOO.

Image
        ಮೃಗಾಲಯದಿಂದ ಕಂಡ ಮಹಾರಾಜಾಲಯ ....          ಕಳೆದವರ್ಷದಲ್ಲೊಂದು ದಿನ ನನ್ನ  ೭೦-೩೦೦ಮಿಮೀ ದೂರದರ್ಶಿ ಮಸೂರವನ್ನು ಮೃಗಾಲಯಕ್ಕೆ ಒಯ್ದಿದ್ದೆ.  ವನ್ಯಜೀವಿ ಛಾಯಾಗ್ರಹಣವವು ನನ್ನ ತುತ್ತಲ್ಲ; ಎಂದೂ ನನ್ನ ಆಸಕ್ತಿಯಾಗಿರಲಿಲ್ಲ . ಅಂದುಮಾತ್ರ ಈ ದೂರದರ್ಶಿ ಮಸೂರದ ಸದ್ಬಳಕೆ ಮಾಡುವ ಇರಾದೆಯಿಂದ ಹುಲಿ-ಸಿಂಹಾದಿಗಳು ಸಿಕ್ಕರೆ ನೋಡುವಾ ಎಂದು ಅಲ್ಲಿಗೆ ಹೋಗಿದ್ದೆ.  ಮೃಗಾಲಯದಲ್ಲಿ ಹುಲಿಗಳಿರುವ ಆವರಣವನ್ನು ತಲುಪಿ, ಕ್ಯಾಮರಾವನ್ನು ಸಿದ್ಧಪಡಿಸಿಕೊಂಡೆ ಕೂಡಾ. ತುತ್ತೂರಿಯಂತಿರುವ ಬೃಹತ್ ಮಸೂರಗಳನ್ನು ಗುರಿಯಿಟ್ಟುಕೊಂಡು ಕಾಯುತ್ತಿದ್ದ ಕೆಲವು ಅಭ್ಯಾಸಿಗಳನ್ನೂ, ಹಾಗಲ್ಲದೆ ಚರವಾಣಿಗಳ ಕ್ಯಾಮರಾಗಳನ್ನು[Cell Phone Camera]  ಗುರಿಮಾಡಿ ಹಿಡಿದ  ನೂರಾರು ಜನರನ್ನೂ ನೋಡಿದೆ.  ನಾನು ಇತೋ ಭ್ರಷ್ಟ: ತತೋ ಭ್ರಷ್ಟ: ಏಕೆಂದರೆ, ನನ್ನ ಉಪಕರಣವು ಆ ಅಭ್ಯಾಸಿಗಳದ್ದಂತೆ ಮಹಾಸಮರ್ಥವಲ್ಲ; ಇತ್ತ ಚರವಾಣಿಯ ಕ್ಯಾಮರಾದಿಂದಲೇ  ಎಲ್ಲವನ್ನೂ ಸೆರೆಹಿಡಿಯಬಲ್ಲೆನೆಂಬುವ ಛಾತಿಯೂ ನನಗಿಲ್ಲ.          ಹುಲಿಯು ಮರೆಯಿಂದ ಹೊರಗೆ ಬಂದಿತು. ರಾಜಗಾಂಭೀರ್ಯದಿಂದ ಅತ್ತಿತ್ತ ನೋಡುತ್ತಾ ನಡೆದು ಬರುತ್ತಿದ್ದ ಅದರ ಠೀವಿಯೇ  ಒಂದು ಸೊಗಸು. ಇತ್ತ  ನೆರೆದ ಜನಸ್ತೋಮದಲ್ಲಿ ತುಮುಲವೇ ಉಂಟಾಯಿತು...

UNIQUE PLACE TO SLEEP...

Image
ಅಪೂರ್ವ ನಿದ್ರಾವಿಧಾನ...        ನಗರದ ಬಾಲಗಂಗಾಧರನಾಥ ಮೇಲ್ದಾರಿಯಿಂದ ಕೆ. ಆರ್. ಮಾರುಕಟ್ಟೆಗೆ ಇಳಿಯುವ ಕವಲಿನ  ಬಲಭಾಗದಲ್ಲಿ  ಕಂಡ ದೃಶ್ಯವಿದು. ಒಬ್ಬಾನೊಬ್ಬ ವ್ಯಕ್ತಿಯು, ರಸ್ತೆಯಲ್ಲಿ ಸಂಚಾರನಿಯಂತ್ರಣದ ಬಳಕೆಗೆಂದು ಇಡಲಾಗಿದ್ದ ಕಬ್ಬಿಣದ ತಡೆಗೋಡೆಯನ್ನೇ ತನಗೆ ಬಿಸಿಲಿನಿಂದ ಹಾಗೂ  ಧಾವಿಸಿ ಬರುವ ವಾಹನಗಳಿಂದ ರಕ್ಷಿಸಿಕೊಳ್ಳಲು ಏರ್ಪಾಡು ಮಾಡಿಕೊಂಡು ಗಡದ್ದಾಗಿ ನಿದ್ರಿಸುತ್ತಿದ್ದ! ನಿದ್ರೆ, ಶ್ರಮಬಾಹುಳ್ಯಜನ್ಯವಾದದ್ದೇ ಅಥವಾ ಅತಿಮದ್ಯಪಾನಮೂಲವಾದದ್ದೇ ಎಂಬ ಜಿಜ್ಞಾಸೆ ಇಲ್ಲಿ ಅಪ್ರಸ್ತುತ.          ನಡೆದುಹೋಗುವುದಕ್ಕೇ  ಸ್ಥಳವಿಲ್ಲದೇ ಕಿಷ್ಕಿಂಧಾದಂತಿರುವ ಈ ಮಾರ್ಗದಲ್ಲಿ ಅದುಹೇಗೋ ಹುಡುಕಿಕೊಂಡು ಸಾಲದ್ದಕ್ಕೆ ಸಿಕ್ಕ ತಡೆಗೋಡೆಯನ್ನೇ ಅಡ್ಡವಿಟ್ಟುಕೊಂಡು ನೆಮ್ಮದಿಯಾಗಿ ನಿದ್ರೆಹೋದ ಆತನ ಪ್ರವೃತ್ತಿಗೊಂದು ಶರಣು. 

MOCKERY OF DEMOCRACY...

Image
  ಮಂಟಪದಲ್ಲಿ ಶುನಕ; ಪ್ರಜಾಪ್ರಭುತ್ವದ  ಅಣಕ!         ನಗರದ ಉದ್ಯಾನವೊಂದರ  ಬದಿಯಲ್ಲಿ ಹಾದುಹೋಗುತ್ತಿದ್ದಾಗ ಕಣ್ಣಿಗೆ ಬಿದ್ದ ದೃಶ್ಯವಿದು.  ಆ ಉದ್ಯಾನದ ಒಳಗೆ ನಿರ್ಮಿಸಿರುವ ಮಂಟಪವೊಂದರಲ್ಲಿ ಬೀದಿನಾಯಿಯೊಂದು ಕುಳಿತಿತ್ತು.  ಅದನ್ನು ನೋಡಿ, ನನಗೆ ಸ್ವಾತಂತ್ರ್ಯಾನಂತರದ ನಮ್ಮ ದೇಶದ ಪ್ರಜಾಪ್ರಭುತ್ವದ ಸ್ಥಿತಿ-ಗತಿಗಳು ಒಂದು ದೃಶ್ಯವಾಗಿ- ರೂಪಕವಾಗಿ  ಕಣ್ಣಿಗೆ ರಾಚಿದಂತಾಗಿ. ಅನಾಮತ್ತು ಕ್ಲಿಕ್ಕಿಸಿಕೊಂಡೆ.          ಇಲ್ಲಿ ನಾನು ನಾಯಿಯನ್ನು ಹೀನತೆಯ ಸಂಕೇತವಾಗಿ ಅರ್ಥೈಸುತ್ತಿದ್ದೇನೆ; ನಿಷ್ಠೆ ಎಂಬ ಸಕಾರಾತ್ಮಕ ಅರ್ಥದಲ್ಲಲ್ಲ.  ಈ ಇಂಗಿತವನ್ನು ಮನದಲ್ಲಿಟ್ಟುಕೊಂಡು ನೋಡಬೇಕು.   ಮೊದಲೇ ನಾಯಿ; ಮೇಲಾಗಿ ಬೀದಿನಾಯಿ, ಸುಂದರವಾಗಿ ನಿರ್ಮಿಸಿದ ಉದ್ಯಾನದಲ್ಲಿ  ಸರಿಯಾದ ನಿರ್ಬಂಧವ್ಯವಸ್ಥೆಯಿಲ್ಲದೇ  ಒಳಗೆ ನುಗ್ಗಿದೆ,  ಅಲ್ಲಿದ್ದ  ಮಂಟಪವೊಂದರಲ್ಲಿ [ಅದು ಖಂಡಿತವಾಗಿಯೂ ಈ ನಾಯಿಗಳಿಗೆಂದು ಮಾಡಿದ್ದಲ್ಲ!] ಹೋಗಿ ವಿರಾಜಮಾನವಾಗಿ ಕುಳಿತಿತು! ಎಂಥಾ ವಿಪರ್ಯಾಸ? ಇದನ್ನಲ್ಲವೇ ಈಗ ನಾವು ಪ್ರಜಾಪ್ರಭುತ್ವ ಎಂದು ಭ್ರಮಿಸಿಕೊಂಡು ಬೀಗುತ್ತಿರುವುದು?  ಹೀನಸ್ವಭಾವದ, ಅದಕ್ಕಿಂತಾ ಹೀನಹಿನ್ನೆಲೆಯಿರುವವನೊಬ್ಬ, ಅದ್ಭುತವಾದ ಜೀವನಮೌಲ್ಯಗಳಿಂದ ಕೂಡಿರುವ ನಮ್ಮ ಭಾರತದೇಶವೆಂಬ  ಉದ್ಯಾನವನದಲ್ಲಿ...

PRAYING BEFORE GOD....

Image
ಸೂರ್ಯದೇವನ ಮುಂದೆ ಪ್ರಾರ್ಥನೆ...          ಅದೇ ಕೋಮಾಛಾಯಾ ಕಾರ್ಯಕ್ರಮದಂದೇ ಕಣ್ಣಿಗೆ ಬಿದ್ದ ಮತ್ತೊಂದು ದೃಶ್ಯವಿದು.  ಸಾಮಾನ್ಯವಾಗಿ ಲಲಿತಮಹಲ್ ಆಸುಪಾಸಿನಲ್ಲಿ  ಸುಂದರವಾದ ಸೂರ್ಯೋದಯ-ಸೂರ್ಯಾಸ್ತಗಳು ಕಣ್ಣುತುಂಬುತ್ತವೆ.  ಈ ಸಲ  ಹೀಗಾಯಿತು- ಕ್ಯಾಮೆರಾವನ್ನು ಹೊಂದಿಸಿಕೊಳ್ಳುತ್ತಿದ್ದ ನನ್ನ ಪಕ್ಕದಲ್ಲಿ ಒಬ್ಬರು ನಡೆದು ಹೋದರು,  ಬಾಯಲ್ಲಿ ಏನೋ ಮಣಗುಟ್ಟುತ್ತಿದ್ದು, ಕೈಗಳಲ್ಲಿ ಜೋರಾಗಿ ಚಪ್ಪಾಳೆ ತಟ್ಟುತ್ತಾ ನಡೆದಿದ್ದರು. ನಾನು ನಿಂತಿದ್ದ ನೆಲೆಗಿಂತ ಸ್ವಲ್ಪ ಎತ್ತರವಾದ, ದಿಗಂತದಂಚು ಎನ್ನಬಹುದಾದ,  ಪ್ರದೇಶವನ್ನು ಸೇರಿ ಸೂರ್ಯನೆಡೆಗೆ ಕೈ ಮುಗಿದು ನಿಂತು ಹಾಗೇ ಪ್ರಾರ್ಥಿಸುತ್ತಿದ್ದರು.  ನಾನು ಬೇರೆ ಬೇರೆ ಸಂಯೋಜನೆಗಳನ್ನು ಮಾಡಿ ಕೊನೆಗೆ ಅವರನ್ನೂ ಸೇರಿಸಿಕೊಂಡು ಚಿತ್ರಿಸುವವರೆಗೂ ಅವರಲ್ಲೇ ನಿಂತಿದ್ದರು.  ನಾನು ಬಳಸುತ್ತಿದ್ದುದು ದೂರದರ್ಶಿ ಮಸೂರವಾದ್ದರಿಂದ ಅವರಿಗೆ ತಾವೂ  ಈ ಚಿತ್ರದ ಭಾಗವಾಗಿರುವುದು ತಿಳಿಯುವ ಸಾಧ್ಯತೆಯೇ ಇರಲಿಲ್ಲ.         ಈ ಚಿತ್ರದಲ್ಲಿ ಇರುವುದು ಮೂರೇ ಧಾತುಗಳು[Elements]. ಸೂರ್ಯ,  ಮರ  ಮತ್ತು  ಮನುಷ್ಯ.  ಬೆಳಗುತ್ತಿರುವ ಸೂರ್ಯನು  ದೈವಶಕ್ತಿಯ ಸಂಕೇತವಾದರೆ, ತನ್ನ ವಿಸ್ತಾರವಾದ ಶಾಖೋಪಶಾಖೆಗಳಿಂದ ಕೂಡಿರುವ ಮರ- ಪ್ರಕೃತಿಯ ಸಂಕೇತ. ಮರದ ಟೊಂಗ...

THE SUNRISE BEHIND LALITHAMAHAL.

Image
ಲಲಿತಮಹಲ್ ಗೋಪುರದ ಹಿಂದೆ ಸೂರ್ಯೋದಯ...          ಕೆಲವು  ದಿನಗಳ ಹಿಂದೆ ಕೊಮಾಛಾಯಾ  ಕಾರ್ಯಕ್ರಮಕ್ಕೆಂದು  ಹೋಗಿದ್ದಾಗ ಸಿಕ್ಕ ದೃಶ್ಯಗಳಲ್ಲಿ ಒಂದು ಇಲ್ಲಿದೆ.  ಲಲಿತಮಹಲ್ ಅರಮನೆಯ ಅಸುಪಾಸಿಗೆ ಹೋಗಿದ್ದರಿಂದ  ಸೂರ್ಯೋದಯದ ದೃಶ್ಯಗಳು ನನ್ನ ಗುರಿಯಾಗಿದ್ದವು. ಆ ಲಲಿತಮಹಲ್ಲಿನ ಗೋಪುರದ ಹಿಂದೆ ಸೂರ್ಯಬಿಂಬವನ್ನು ಸಂಯೋಜಿಸಿಕೊಂಡರೆ ೨/೩ ನೀತಿಗೂ ಅನ್ವಯವಾಗುತ್ತದೆ ಎಂದೆನ್ನಿಸಿ, ಸೂಕ್ತ ಸ್ಥಳದಲ್ಲಿ ಅತ್ತಿತ್ತ ಅಡ್ಡಾಡಿ ಕೆಲವಾರು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡೆ.  ಅವುಗಳಲ್ಲಿ ಒಂದನ್ನು ಇಲ್ಲಿ ಹರವಿರುವೆ.         ಸೂರ್ಯೋದಯದ ಚಿತ್ರಗಳು ಯಾರಿಗೆ ಇಷ್ಟವಲ್ಲ?  ಆದರೆ ಇಲ್ಲಿ ನಾನು ಸ್ವಲ್ಪ ಚಿಂತನಾಪಥವನ್ನು ತಿರುಗಿಸಲು ಪ್ರಯತ್ನಿಸುತ್ತೇನೆ.  ಸೂರ್ಯನು ನಮ್ಮೆಲ್ಲರಿಗೂ ಕಾಣುವ ಪ್ರತ್ಯಕ್ಷದೇವನೇ ಸರಿ.  ಇಲ್ಲಿರುವ ಗೋಪುರವನ್ನು ಮನುಷ್ಯನ ಪ್ರತಿಷ್ಠೆಯ ಸಂಕೇತವೆಂದುಕೊಂಡರೆ, ಹಾಗೂ ಆ ಪ್ರತಿಷ್ಠೆಯ ಮೇಲ್ತುದಿಯಲ್ಲೊಂದು ಪುರುಷಾಹಂಕಾರವೆನ್ನುವ  ಮರಿಗೋಪುರವಿದೆ !   ಆ ಗೋಪುರದ್ವಯದ  ನಭಚುಂಬೀ ಪ್ರವೃತ್ತಿಯನ್ನು ಮೇಲಿರುವ ದೇವನು  ಚೋದ್ಯದಿಂದ-ಪರಿಹಾಸದಿಂದ ನೋಡುತ್ತಿರುವನು. ನೆಲಮಟ್ಟದಿಂದ - ಎಂದರೆ ಏನೇನೂ ಅರಿಯದ, ತಲೆ-ಬಟ್ಟಲು ಖಾಲಿಯಿರುವ  ಜನರ ದೃಷ್ಟಿಯಿಂದ ಈ ನರನಿರ್ಮಿ...

COWHERD WOMAN.

Image
        ಹೊರೆ ಹೊತ್ತ ಮಹಿಳೆ...          ವಿಶ್ವೇಶ್ವರಯ್ಯ ನಾಲೆಯ ಪಕ್ಕದಲ್ಲೇ ಸಾಗುವ ದಾರಿಯಲ್ಲಿ  ಒಂದಾನೊಂದು ಸಂಜೆ ಕಂಡ ದೃಶ್ಯವಿದು. ತನ್ನ ಹಸು-ಕರುಗಳನ್ನು  ಅಟ್ಟಿಕೊಂಡು ಮನೆಕಡೆಗೆ ತೆರಳುತ್ತಿದ್ದ ಆ ಮಹಿಳೆಯ ಚಿತ್ರ, ಹಿಂದೀಪ್ತವಾಗಿದ್ದುದರಿಂದ[Backlit] ಸ್ವರಸವೆನ್ನಿಸಿತು,  ಕ್ಯಾಮೆರಾದ ಸ್ಮೃತಿಕೋಶ ಸೇರಿತು.          ಈ ಚಿತ್ರವು  ಕಪ್ಪು-ಬಿಳುಪಿನಲ್ಲಿರಬಹುದಾಗಿತ್ತು ಎನ್ನುವ ವೀಕ್ಷಕರಿಗೆ  ನನ್ನ ಸಣ್ಣದೊಂದು ಸ್ಪಷ್ಟನೆ: ಹಾಗೆ ಮಾಡಿದ್ದರೆ  ಚಿತ್ರದಲ್ಲಿರುವ ಸಂಜೆಯ ಹಳದೀ ಬಣ್ಣದ  ಬೆಳಕು ಕೈ ತಪ್ಪಿಹೋಗುತ್ತಿತ್ತು. ಕೇವಲ ನೆರಳು-ಬೆಳಕಿನಾಟ ಮಾತ್ರವೇ ವಸ್ತುವಾಗಿರುತ್ತಿತ್ತು.  ನನ್ನ ಆಶಯವಿರುವುದೇ  ಸಂಜೆಯ ಈ ಹಳದೀ ಬಣ್ಣ, ಹಲವಾರು ಸ್ತರಗಳಲ್ಲಿ  ಪಡಿಮೂಡುವುದನ್ನು  ಹೇಳಲು.           ನಮ್ಮ ಶಾಸ್ತ್ರೀಯ ಸಂಗೀತದಲ್ಲಿ ಈ ಸಮಯಕ್ಕೆಂದೇ ಅನ್ವರ್ಥವಾದ ರಾಗವೊಂದಿದೆ- 'ದೇಶ್ಯ'ವೆಂದು. ಈ ರಾಗದಲ್ಲಿ ಹಲವಾರು ಜನಪ್ರಿಯ ಗೀತೆಗಳನ್ನೂ ವಾಚಕರು ಕೇಳಿರಬಹುದು.  'ಮ-ಗ-ರೀ-ಮ-ಪ/ ಮ-ಪ-ನೀ-ನಿ-ಸಾ//' ಎಂಬಿತ್ಯಾದಿಯಾಗಿ  ಹೊರಳುವ ಆ ರಾಗದ ಸಂಚಾರವನ್ನು ಅನುಭವಿಸುವುದೇ ಸೊಗಸು. ಈ ಚಿತ್ರದಲ್ಲಿನ ಸಂಜೆ...

MAYFLOWER BLOOMS..

Image
        ಕೆಂಪಿನ ಕಲರವ. .          ಚಾಮರಾಜನಗರದ  ಆಚೆ ಸುವರ್ಣಾವತಿ ಜಲಾಶಯವಿರುವುದಷ್ಟೇ? ವಸಂತ-ಗ್ರೀಷ್ಮಗಳ ಕಾಲದಲ್ಲಿ ಒಂದಾನೊಮ್ಮೆ ಅತ್ತ ಎಡತಾಕಿದ್ದಾಗ  ಅಲ್ಲಿ ಕಂಡ ದೃಶ್ಯವಿದು.  ಬೇಸಿಗೆಯಲ್ಲಿ ಜಲಾಶಯದ ಬಳಿ ಏನೂ ಕೆಲಸವಿಲ್ಲವಾದರೂ  ಆ ಮಾರ್ಗದ ಹೆದ್ದಾರಿಯುದ್ದಕ್ಕೂ  ಅಲ್ಲಲ್ಲಿ ಅಕ್ಕಪಕ್ಕದಲ್ಲಿ ಬೆಳೆದಿರುವ  ಗುಲ್ಮೊಹರ್ ಮರಗಳ ಸೊಗಸು, ನನ್ನನ್ನು ವಶೀಕರಿಸುತ್ತದೆ.          ಜಲಾಶಯದ ಮುಂದೆ ಮಣ್ಣುರಸ್ತೆಯಿದೆ. ಹೊರಹರಿವಿನ ಕಾಲುವೆಯನ್ನು ದಾಟಿ ಮತ್ತೊಂದು ತುದಿಯನ್ನು ಸೇರಿಸುವ ರಸ್ತೆಯದು.  ಅಲ್ಲಿ ಈ ಮರ ನನ್ನ ಕ್ಯಾಮೆರಾಕ್ಕೆ ಸೆರೆಯಾಯಿತು. ಇಡೀ ಚಿತ್ರದಲ್ಲಿ ಚಿಗುರಿದ ಹಸಿರು ಪ್ರಧಾನವಾಗಿದೆ. ಎಡಮೇಲ್ಭಾಗದಲ್ಲಿ ಸ್ವಲ್ಪ ಮೋಡಗಳ ಜಮಾವಣೆಯಿದೆ.  ಪ್ರಾಥಮಿಕವರ್ಣಗಳೆನ್ನಿಸುವ ಹಸಿರು ಮತ್ತು ನೀಲಿಯಿದ್ದ ಮೇಲೆ ಕೆಂಪಿಲ್ಲದಿದ್ದರೆ ಸೊಗಸೆನ್ನಿಸೀತೆ?  ಇಡೀ ಚೌಕಟ್ಟಿಗೆ ಎಡದಿಂದ  ಆವರಣವೆನ್ನಿಸುವಂತೆ ಕಾಣುವ  ಈ ಗುಲ್ಮೊಹರ್ ಮರವೇ ವಿಜೃಂಭಿಸಿ, ಕಾಣಿಸುತ್ತದೆ.  

FEATURELESS FACES...

Image
      ಚಹರೆಯಿಲ್ಲದ ಮುಖಗಳು?.....          ನಗರದ ಹೃದಯಭಾಗದಲ್ಲಿ ನಡೆದುಹೋಗುತ್ತಿದ್ದಾಗ ಕಂಡ ದೃಶ್ಯವಿದು.  ಹಿಂದೆಲ್ಲಾ ಬಟ್ಟೆಯಂಗಡಿಗಳಲ್ಲಿ ಇಡುತ್ತಿದ್ದ ಪ್ರದರ್ಶನದ ಬೊಂಬೆಗಳು  ಆಕರ್ಷಕವಾಗಿಯೂ ಇರುತ್ತಿದ್ದವು, ಆಪಾದಶಿರಪರ್ಯಂತ ಕಲಾವಿದನೊಬ್ಬಮಾಡಿದ ಶಿಲ್ಪದಂತೆ ಲಕ್ಷಣವಾಗಿಯೂ ಇರುತ್ತಿದ್ದವು.  ಮನೆಗಳಲ್ಲಿ ತಾಯಂದಿರು  ತಮ್ಮ ಮಕ್ಕಳನ್ನು ತಿದ್ದುವ ಸಂದರ್ಭಗಳಲ್ಲಿ " ನೀನು ಅಂಗಡಿ ಮುಂದಿಟ್ಟಿರುವ ಬೊಂಬೆಯಲ್ಲ; ಸಿಂಗರಿಸಿಕೊಂಡು ಸುಮ್ಮನೆ ನಿಂತಿರುವುದಕ್ಕೆ- ಸರಿಯಾಗಿ ಮೈ ಬಗ್ಗಿಸಿ ಕೆಲಸಮಾಡು" ಎಂದು  ಇವೇ ಬೊಂಬೆಗಳನ್ನು ಉಪಮಾನವಾಗಿ ಬಳಸಿ ಹೇಳುತ್ತಿದ್ದರು.             ಕಾಲ ಕಳೆಯಿತು; ಈ ಬೊಂಬೆಗಳ ರಚನೆಯೂ ಬದಲಾಯಿತು,  ಮನೆಗಳಲ್ಲಿ ತಾಯಂದಿರ-ಮಕ್ಕಳ ಮನೋಧರ್ಮವೂ ಬದಲಾದವು.  ಇಡೀ ಆಕೃತಿಯನ್ನು  ಮಾಡಿಡುವ ಬದಲು ಬೀದಿಬದಿ ವ್ಯಾಪಾರಿಗಳಿಗೂ ಕೈಗೆಟುಕುವಂತೆ ಪ್ಲಾಸ್ಟಿಕ್ ಹಾಳೆಯನ್ನು ಉಬ್ಬಿಸಿ ಮಾಡಿದ, ಮುಂಡವಷ್ಟೇ  ಇರುವ ಮಾದರಿಯ ಬೊಂಬೆಗಳು ಎಲ್ಲೆಲ್ಲೂ ಕಾಣಲಾರಂಭಿಸಿದವು.  ದೊಡ್ಡದೊಡ್ಡ ಅಂಗಡಿಗಳಲ್ಲಿ  ಸಿರಾಮಿಕ್ ಮತ್ತಿತರ ದ್ರವ್ಯಗಳನ್ನು ಬಳಸಿ ಮಾಡಿದ, ಇಡೀ ಆಕೃತಿ ಮನುಷ್ಯರಂತಿದ್ದರೂ ಮುಖಮಾತ್ರ   ಕಣ್ಣು-ಮೂಗು ಮುಂತಾದ ಯಾವ ಅಂಗಗಳೂ ಇ...

BRIDGE AT HANASOGE.

Image
ಮೂರು ಪಾತಳಿಗಳ ಮೇಲಾಟ...        ಕೃಷ್ಣರಾಜನಗರದಿಂದ ಚುಂಚನಕಟ್ಟೆ ಮಾರ್ಗವಾಗಿ ಕಾವೇರೀನದಿಯ ದಕ್ಷಿಣತೀರದಲ್ಲೇ ಸಾಗಿದರೆ ಹನಸೋಗೆ ಎಂಬ ಗ್ರಾಮ ಸಿಗುತ್ತದೆ. "ಏಕಾಂತದೇಶೇ ಸರಿತೋಸಮೀಪೇ " ಎಂಬಂತೆ ಪ್ರಶಾಂತವಾದ ಸ್ಥಳವದು.  ಅಲ್ಲಿ ಇತ್ತೀಚೆಗೆ  ಹೊಸದಾಗಿ ಸೇತುವೆಯೊಂದನ್ನು ನಿರ್ಮಿಸಿದ್ದಾರೆ![ಅದರ ಹಿಂದಕ್ಕೂ-ಮುಂದಕ್ಕೂ ಇನ್ನೂ ರಸ್ತೆಯನ್ನೇ ನಿರ್ಮಿಸಿಲ್ಲವಾದರೂ ಸರಿ!!]  ನದೀತೀರಗಳ ಬಗ್ಗೆ ತೀರದ ಚಾಪಲ್ಯವನ್ನು ಹೊಂದಿರುವ ನನಗೆ  ಈ ಪರಿಸರ ಅಪ್ಯಾಯಮಾನವೆನ್ನಿಸಿತು. ಅಲ್ಲಿ  ಹಾಗೇ  ಅಡ್ಡಾಡುತ್ತಿದ್ದ ನನಗೆ ಈ ಒಣಗಿನಿಂತ ಮರದ ಹಿನ್ನೆಲೆಯಿಂದ ಸಿಗುವ ದೃಶ್ಯಸಾಧ್ಯತೆ ಸ್ವಾರಸ್ಯವೆನ್ನಿಸಿತು. ಸಂಗ್ರಹಕ್ಕೆ ಸೇರಿಸಿಕೊಂಡೆ.          ಈ ಚಿತ್ರದಲ್ಲಿ ಪ್ರಧಾನವಾದ ವಸ್ತುವೆಂದರೆ ಆ ಒಣಗಿ ನಿಂತ ಮರವೇ. ಅದರ ನಿಲುವು  ಉದ್ದುದ್ದ[ಎತ್ತರ],  ಹಾಗಾಗಿ ಉದ್ದ ಮಾದರಿಯ ಚೌಕಟ್ಟನ್ನೇ   ಆಯ್ದುಕೊಂಡೆ.  ಹರಿಯುತ್ತಿರುವ ನೀರು ಮತ್ತು ಮೇಲೆ ಕಟ್ಟಿರುವ ಸೇತುವೆ ಇವು, ಪರಸ್ಪರ ಲಂಬವಾಗಿದ್ದು, ಎರಡು ಪ್ರತ್ಯೇಕ ಪಾತಳಿಗಳನ್ನು ಉಂಟುಮಾಡುತ್ತಿವೆ.  ಮೊದಲು ಹೇಳಿದ ಮರವಾದರೋ ನಿಲುವು ಉದ್ದವಾದರೂ ವೀಕ್ಷಕರಿಗಭಿಮುಖವಾದ ಮೂರನೇ ಪಾತಳಿಯನ್ನು ಆಗಮಾಡಿಸಿವೆ.  ಹಾಗೇ ವಸ್ತುವಿಭಿನ್ನತೆಯಿಂದಲೂ ...

HOUSE AT HATTIHOLE..

Image
     ಹಟ್ಟಿಹೊಳೆಯ ಮನೆ.          ಮಡಿಕೇರಿಯಿಂದ ಸೋಮವಾರಪೇಟೆಗೆ ಹೋಗುವ ರಸ್ತೆಯಲ್ಲಿ ಹಟ್ಟಿಹೊಳೆ ಎಂಬಲ್ಲಿ  ಒಂದು  ತೊರೆಯೂ ಅದಕ್ಕೊಂದು ಸೇತುವೆಯೂ ಇದೆ. ಕೋಟೆಬೆಟ್ಟಕ್ಕೆ ಚಾರಣಕ್ಕೆಂದು  ಹೋಗುವವರು ಇಲ್ಲಿಂದಲೇ ಎಡಕ್ಕೆ ಕವಲೊಡೆವ ದಾರಿಯಲ್ಲಿ ಸಾಗಿ  ಮುಂದೆ ಹೋಗುವರು.  ಆ ತೊರೆಯ ಪಕ್ಕದಲ್ಲೇ ಸಾಗುವ ದಾರಿಯೇ - ಇಲ್ಲಿ ಕಾಣುತ್ತಿರುವುದು.  ಅದರ ಪಕ್ಕದಲ್ಲೊಂದು  ಮನೆ!  [ ಅಲ್ಲಿರುವುದು ಅದೊಂದೇ ಮನೆಯಲ್ಲ,  ಒಂದು ಚರ್ಚು, ಒಂದು ಶಾಲೆ ಮತ್ತು ಇತರ  ಮನೆಗಳೂ ಇವೆ. ]          ನನಗಿಲ್ಲಿ ಸ್ವಾರಸ್ಯವೆನ್ನಿಸಿದ್ದು,  ಇಡೀ ವಾತಾವರಣದಲ್ಲಿ ಸಹಜವಾದ ಬಣ್ಣಗಳೇ ತುಂಬಿವೆ.  ಮರಗಳ ಹಸಿರು, ಆಗಸದ ನೀಲಿ,  ಚಾವಣಿಯ ಹೆಂಚಿನ ಹಾಗೂ ನೆಲದ ಮಣ್ಣಿನ ಕೆಂಪು ಇತ್ಯಾದಿ ನೈಸರ್ಗಿಕವಾಗಿ - ಕೇವಲ ಕಾಣುತ್ತಿವೆಯಷ್ಟೇ  ಅಲ್ಲ:  ಇವೆ ಕೂಡಾ.  ಆದರೆ ವೈಯುಕ್ತಿಕ ಇಷ್ಟಗಳ  ಕಾರಣದಿಂದಲೋ, ವಾಸ್ತುಪ್ರಕಾರ ಎಂಬ ಉಪಾಧಿಗೆ ಅಂಜಿಯೋ ಅಂತೂ ಆ ಮನೆಗೆ ಹಚ್ಚಿರುವ ಬಣ್ಣ  ಸುತ್ತಲ ದೃಶ್ಯದ ಒಟ್ಟಂದಕ್ಕೆ ಪೂರಕವಾಗಿ ಹೊಂದಿಕೊಳ್ಳುತ್ತಿಲ್ಲ: ಪರಂತು,  ಹೊರತಾಗಿಯೇ ಉಳಿದುಬಿಟ್ಟಿದೆ!  ಚಿತ್ರಕಲಾವಿದನೊಬ್ಬನ ಕನವರಿಕೆಗಳಲ್ಲಿ ಹೀಗೊಂದು ರಮ್ಯಹರ್ಮ್ಯವು ಮೂಡ...

THE COCONUT SELLER.

Image
      OPEN-ನೀರು-SELLವಮ್. 

ROAD TO KARIGHATTA.

Image
      ಸರ್ಪವೀಥಿ....         ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಶ್ರೀರಂಗಪಟ್ಟಣ-ಬಾಬುರಾಯನಕೊಪ್ಪಲಿಗೆ ಮುಂಚೆ ಎಡಕ್ಕೆ ಬನ್ನೂರು ರಸ್ತೆ ಶುರುವಾಗುತ್ತದೆ.  ಅದರಲ್ಲೇ ಮುಂದೆ ಸಾಗಿದರೆ ಅನತಿದೂರದಲ್ಲೇ ಕರಿಘಟ್ಟ ಎಂಬ ಚಿಕ್ಕ ಬೆಟ್ಟ ಸಿಗುತ್ತದೆ.  ಬೆಟ್ಟದ ಮೇಲೆ ಶ್ರೀನಿವಾಸಸ್ವಾಮಿಯ ದೇವಸ್ಥಾನವಿದೆ.  ವಾರಾಂತ್ಯಕ್ಕೊಂದು ವಿಶಿಷ್ಟ ತಾಣ.   ದಶಕದ ಹಿಂದೆ ಬೆಟ್ಟ ಹತ್ತುವ ರಸ್ತೆಯು ಏನೇನೂ ಚೆನ್ನಾಗಿರಲಿಲ್ಲ.  ಇತ್ತೀಚೆಗಿನ ವರ್ಷಗಳಲ್ಲಿ ವ್ಯವಸ್ಥಿತವಾಗಿ ಆಗಿದೆ.  ಇಂದಿನ ಗ್ರಾಸ ಅದೇ.          ಕೇವಲ ನಾಲ್ಕಾರು ತೀವ್ರತಿರುವುಗಳಿರುವ ಈ ರಸ್ತೆಯು, ಅಲ್ಲೇ  ಮೇಲೆ ಒಂದು ನಿರ್ದಿಷ್ಟಜಾಗದಿಂದ  ಈ ರೀತಿಯಾಗಿ ಕಾಣುತ್ತದೆ.  ಒಂದೇ ಗುಕ್ಕಿಗೆ ಈ ನಾಲ್ಕೂ ತಿರುವುಗಳು ಕಣ್ತುಂಬುತ್ತವೆ.  ಕ್ಯಾಮರಾದಲ್ಲಿ  ಎಚ್ ಡಿ  ನೆಲೆಗಟ್ಟನ್ನು  ಏರ್ಪಡಿಸಿ  ಚಿತ್ರಿಸಿದ ದೃಶ್ಯವಿದು.          ಹೇಳಿ ಕೇಳಿ ಬೆಟ್ಟದೊಡೆಯನೆಂದರೆ ಶ್ರೀನಿವಾಸನೇ .  ಶ್ರೀನಿವಾಸನಿರುವುದು  ಶೇಷಾಚಲದಲ್ಲಿಯೇ.   ಈ ರಸ್ತೆಯೂ ಕೂಡಾ  ಶೇಷನಂತೆ  ಸರ್ಪಾಕೃತಿಯಲ್ಲೇ  ನಿರ್ಮಿತವಾಗಿದೆ!    ತಿರುಪತಿ ಮತ್ತಿತರ ಸ್ಥಳಗಳಲ್...

MADIKERI FORT VIEW......

Image
        ಮಡಿಕೇರಿ ಕೋಟೆ ಮತ್ತು ಮುಂದಿನ ರಸ್ತೆ..          ಮಾಂದಲಪಟ್ಟಿಯಿಂದ, ಮಡಿಕೇರಿಯ ಒಳಗೆ ಹೋಗದೇ  ಸೋಮವಾರಪೇಟೆ ರಸ್ತೆಗೆ  ತಲುಪುವ ಮಾರ್ಗ ನನಗೆ ಸ್ವಲ್ಪ ವಾಂಛೆಯೇ ಎನಿಸುತ್ತದೆ. . ಹಾಗೆ ನೋಡಿದರೆ ಇಡೀ ಮಡಿಕೇರಿಯೇ ಒಂದು ದೃಶ್ಯಶಿಲ್ಪ! ಸಾಲದ್ದಕ್ಕೆ ಈಗ ಹೇಳಿದ ರಸ್ತೆಯಲ್ಲಿ ಬರುತ್ತಿದ್ದಾಗ ದೂರದರ್ಶಿ ಮಸೂರವೂ  ನನ್ನ ಬತ್ತಳಿಕೆಯಲ್ಲಿತ್ತು. ಮೇಲಿನ ದೃಶ್ಯ ಕಂಡೊಡನೆ ವಾಹನವನ್ನು ಬದಿಗೆ  ನಿಲ್ಲಿಸಿ,  ಕ್ಯಾಮರಾ ಗುರಿಮಾಡಿದೆ. ಸುಮಾರು ಒಂದೂವರೆ ಕಿ.ಮೀ. ನೇರ ದೂರದ ನೋಟವದು.  ಒಂದು ಮೆಟ್ಟಿಲು ಕಡಿಮೆಯೇ  ಬೆಳಕಿಗೀಡುಮಾಡಿ  ಕ್ಲಿಕ್ಕಿಸಿದೆ.  ಅದರ ಫಲಿತವಿಲ್ಲಿದೆ.          ಸುತ್ತಲಿನ ಹಸಿರು ಕಪ್ಪುಛಾಯೆಗೊಳಪಟ್ಟು ಸ್ವಲ್ಪ ಕತ್ತಲಿನ  ಭಾವವನ್ನು ಮೂಡಿಸುವಂತಿದೆ, ಅದಕ್ಕೆ ಪೂರಕವಾಗಿ ಅಲ್ಲಲ್ಲಿ ಕಟ್ಟಡಗಳೂ ತಮ್ಮ ನಿಲುವುಗಳ ಕಾಣಿಕೆಯನ್ನು ನೀಡಿವೆ.  ಆದರೆ, ಮಧ್ಯದಲ್ಲಿ ಕಾಣುವ ರಸ್ತೆಯ  ಬಣ್ಣವು ತಿಳಿಯಾಗಿದ್ದು, ಹಿನ್ನೆಲೆಯಿಂದ ತನ್ನನ್ನು ಮತ್ತು ತನ್ನ ಮೇಲಿರುವ  ವಾಹನಗಳನ್ನು ಪ್ರತ್ಯೇಕಿಸಿ- ಎತ್ತಿ ತೋರಿಸುತ್ತದೆ. ಅದೃಷ್ಟವಶಾತ್, ಆ ವಾಹನಗಳ ಬಣ್ಣಗಳೂ  ತಿಳಿಜಾತಿಯವೇ ಆಗಿವೆ. ಕೋಟೆಯ ಎತ್ತರ ಹಾಗೂ ಇತರ ಕಟ...

END FOR THE DAY'S WORK....

Image
         ದಿನದ ಕಾಯಕದ ಸಮಾಪ್ತಿ...          ಕೆ.ಅರ.ಎಸ  ನ   ಹಿನ್ನೀರಿನ ಪ್ರದೇಶದಲ್ಲಿ ಕಂಡುಬಂದ ದೃಶ್ಯವಿದು.  ಅಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಚಿತ್ರಿಸಲು ಹಲವಾರು ಬಾರಿ ಎಡತಾಕಿದ್ದೇನೆ, ನನ್ನ ಮಿತ್ರ-ಬಾಂಧವರನ್ನೂ ಕರೆದೊಯ್ದಿದ್ದೇನೆ.  ಹಾಗೊಮ್ಮೆ  ಹೋಗಿದ್ದಾಗ ಕಂಡಿದ್ದು ಇದು. ಆ ದೇಗುಲದ ಹಿಂದೆ ಸ್ವಲ್ಪ ದೂರದಲ್ಲಿ ನದೀತೀರದಲ್ಲಿ ಸರಕು-ಸಾಗಣೆ ರಿಕ್ಷಾ ಒಂದು ನಿಂತಿತ್ತು.  ಅದರ ಯಜಮಾನನೂ ಕೆಲಸಗಾರನೂ ಅಲ್ಲೇ ಮಾತಾಡಿಕೊಳ್ಳುತ್ತಿದ್ದರು.  ನನಗೆ ಕೈ ಬೆರಳೂ, ಮನಸ್ಸೂ ಚಡಪಡಿಸಿದವು.  ಕ್ಯಾಮರಾ ಗುಂಡಿಯನ್ನೊತ್ತಿ  ಶಾಂತಿಯನ್ನು  ಹೊಂದಿದೆ.          ಇಡೀ ದೃಶ್ಯದಲ್ಲಿ ಇಬ್ಬರೇ ಇರುವುದು, ಈ ಸಮಯದಲ್ಲಿ  ಮತ್ತೆ ಇನ್ಯಾರೂ ಆ ಪ್ರದೇಶದಲ್ಲೇ ಇರಲಿಲ್ಲ.  ಹಾಗಾಗಿ ಅಲ್ಲಿ ಅವರಿಬ್ಬರದೇ ಏಕಾಂತ,   ಅವರೊಂದಿಗೆ ಮೂಕಶ್ರೋತೃವಾಗಿ ಅವರ ವಾಹನ.  ಇವಿಷ್ಟು ಬಿಟ್ಟರೆ ಮೇಲ್ತುದಿಯಲ್ಲಿ ಮುಳುಗುತ್ತಿರುವ ಸೂರ್ಯ ಮತ್ತು ಕೊನೆಯದಾಗಿ  ಮೂರು ಸ್ತರಗಳಲ್ಲಿ ವಿಸ್ತಾರವಾಗಿ ಹರವಿಕೊಂಡಿರುವ ಅವಕಾಶ[Space].  ಈ ದೃಶ್ಯದಲ್ಲಿ ಮುಳುಗಿಬಿಟ್ಟಂತೇ   ಕಾಣುವ ಸೂರ್ಯ, ನಿರ್ಜನವಾದ ವಾತಾವರಣ, ಸೂರ್ಯಾಸ್ತದ ಛ...

BEFORE HARVEST..

Image
        ಸಂಕ್ರಾಂತಿಗೆ  ಮುನ್ನ  ಕಟಾವಿಗೆ ಸಿದ್ಧವಾಗಿರುವ ಬೆಳೆ ...                                       ಶ್ರೀರಂಗಪಟ್ಟಣದಿಂದ  ಕರಿಘಟ್ಟಕ್ಕೆ  ಹೋಗುವ  ದಾರಿಯಲ್ಲಿ  ಇಕ್ಕೆಲಗಳಲ್ಲೂ  ಪಚ್ಚೆಹಸಿರು: ಭತ್ತದ ಗದ್ದೆಗಳು. ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ವೇಳೆಯಲ್ಲಿ ಪೈರು ಕಟಾವಿಗೆ ಸಿದ್ಧಗೊಂಡಿರುತ್ತದೆ.  ಈ   ಭತ್ತದ ಗದ್ದೆಗಳು ಕಟಾವಿಗೆ ಪಕ್ವವಾದ  ಸಮಯದಲ್ಲಿ  ವಿಶಿಷ್ಟವಾದ ಹೊಂಬಣ್ಣವನ್ನು ತಳೆಯುತ್ತವೆ, ನಮ್ಮಗಳ ಮನಸ್ಸಿಗೆ  ಚೇತೋಹಾರಿಯಾಗಿ ಪರಿಣಮಿಸಿ  ದೇಶ್ ಎಂಬ ರಾಗದ ಭಾವರೂಪವಾದ  ಆನಂದವನ್ನುಂಟುಮಾಡುತ್ತದೆ.  ಇರಲಿ, ಈ ದೇಶ್ ರಾಗದ ವಿಷಯ ಸದ್ಯಕ್ಕೆ ಬೇಡ.           ಪ್ರಸ್ತುತ ಚಿತ್ರದಲ್ಲಿ ಹಳದಿಯಿಂದ ಪ್ರಾರಂಭವಾಗುವ ಬಣ್ಣಗಳ ಹರವು, ಮೇಲೆ ಆಕಾಶದಲ್ಲಿನ - ಹಳದಿಗೆ ಪ್ರತ್ಯರ್ಥಿಯಾದ ನೀಲಿಬಣ್ಣದೊಂದಿಗೆ ಪರ್ಯಾವಸಾನಗೊಂಡಿದೆ. ಮುನ್ನೆಲೆಯಲ್ಲಿನ ಈ ಹಳದಿಯ ವಿಜೃಂಭಣೆ  ಅದರ ಹಿಂದಿರುವ ಕಬ್ಬಿನಗದ್ದೆಗಳ ಹಸಿರಿನಿಂದ ಬೆಂಬಲಿಸಲ್ಪಟ್ಟರೂ,   ಹಿನ್ನೆಲೆಯಲ್ಲಿನ ಬೆಟ್ಟದ ಭಾಗದ  ಹಾಗೂ ಆಗಸದ ಶಾಂತವಾದ, ಪೇಲವವ...

MAHADEVAPURA.....

Image
    ಮಹದೇವಪುರದಲ್ಲಿನ ಜಲರೇಚಕಾಗಾರ..          ಮಹದೇವಪುರವೆಂದರೆ ಛಾಯಾಗ್ರಾಹಕರಿಗೆ  ಭೂರಿಭೋಜನ!! ಇಡೀ ಮಹದೇವಪುರದ ಸಮಗ್ರ ಚಿತ್ರಾವಳಿಯ ವಿಚಾರ ಹಾಗಿರಲಿ.  ಸದ್ಯದ ಗ್ರಾಸವೆಂದರೆ  ಈ  ಚಿತ್ರ ಮಾತ್ರ.  ಇಲ್ಲಿ ಕ್ಯಾಮೆರಾ ಹಿಡಿದು ಅರಸುತ್ತಾ ಹೋದರೆ ಮಿತಿಯಿಲ್ಲದ ಸಾಧ್ಯತೆಗಳು,  ಸ್ಮೃತಿಕೋಶಗಳು ತುಂಬಿ ತುಳುಕುತ್ತವೆ.           ಪ್ರಸ್ತುತ ಚಿತ್ರದಲ್ಲಿ ನಿಶ್ಚಲವಾಗಿರುವ ನೀರು,  ಕಾಲುವೆಯಲ್ಲಿ  ಹರಿವು ನಿಂತಿರುವುದರಿಂದ ಉಂಟಾಗಿರುವುದು. ಆದ್ದರಿಂದಲೇ ಇಲ್ಲಿ ಪ್ರತಿಬಿಂಬ. ತೆಂಗಿನಮರಗಳ ಸಾಲಿನಿಂದ ಏರ್ಪಟ್ಟಿರುವ ಕಮಾನು ಹಾಗೆ ನೀರಲ್ಲೂ ಪ್ರತಿಬಿಂಬಿಸಿ ಅರ್ಧಚಂದ್ರಾಕೃತಿಯಾಗಿದೆ. ಕಟ್ಟಡಗಳ ಸಾಲು ಅದೇ ಪಾತಳಿಯಲ್ಲಿ ಇದ್ದು, ಅದೇ ಪರಿಸರದಲ್ಲಿನ ಇತರ ವರ್ಣವ್ಯಾಪ್ತಿಗಳ ಜತೆಗೆ ಹದವಾಗಿ  ಬೆರೆತಿದೆ. ದೃಶ್ಯ ಸುಂದರವಾಗಿದೆಯಲ್ಲವೇ?   ಆದರೆ, ಇಡೀ  ಚಿತ್ರದ ಸ್ಥಾವರತ್ವಕ್ಕೆ ಕಾರಣವಾಗಿರುವುದು  ಸಾಕಷ್ಟು  ಹರಿವಿಲ್ಲದೆ, ಕಡೇಪಕ್ಷ ನಾಲೆಯ ದುರಸ್ತಿಯಾದರೂ ಮಾಡೋಣವೆಂದು ನಿಲ್ಲಿಸಿಕೊಂಡ ನೀರಿನಿಂದ, ನೀರಿನ ಒರತೆಯ ಕೊರತೆಯಿಂದ.  ಸಂತಸದ ಹಿಂದೆ ಇರುವ ವಿಷಾದ- ಇದೇ. 

CURVES IN TAMARASSERY GHAT ROAD.

Image
        ತಾಮರಸ್ಸೆರಿ  ಘಟ್ಟದ ರಸ್ತೆಯಲ್ಲಿನ ತಿರುವುಗಳು.           ಸುಲ್ತಾನ್ ಬತೇರಿಯಿಂದ  ಕಲ್ಲಿಕೋಟೆಯ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಕ್ಕಿಡಿ ಗಿರಿಧಾಮವನ್ನು ದಾಟಿದ ಮೇಲೆ  ಸ್ವಲ್ಪ ಮುಂದೆ ಒಂದು ವೀಕ್ಷಣಾಗೋಪುರವಿದೆ. ಅಲ್ಲಿಂದ ಪ್ರಾರಂಭವಾಗುವ ಘಟ್ಟಪ್ರದೇಶ ಕೆಲವು ಮೈಲುಗಳ ನಂತರ ಮುಗಿಯುತ್ತದೆ.  ಆದರೆ ರಸ್ತೆ ಅಗಲವಾಗಿದ್ದರೂ, ಪಕ್ಕದ ಇಳಿಜಾರು ಅತ್ಯಂತ ಕಡಿದಾಗಿದ್ದು ತುಂಬಾ ಅಪಾಯಕಾರಿಯಾಗಿದೆ.  ಈ ವೀಕ್ಷಣಾಗೋಪುರದ ಸಮೀಪದಿಂದ ಒಂದು ಕುತೂಹಲಕಾರಿಯಾದ ದೃಶ್ಯ ಕಾಣಸಿಗುತ್ತದೆ.  ಕೆಳಗೆ ನೇರ ಮುಂದೆ, ಸುಮಾರು ನಾನೂರು ಆಡಿಗಳ ಆಚೆಗೆ,  ಇದೆ ಹೆದ್ದಾರಿಯ ಮುಂದುವರಿದ ಭಾಗ ಕಾಣುತ್ತದೆ. ತಿರುವು ಎರಡು , ಮೂರು ಮತ್ತು ನಾಲ್ಕು  ಇಲ್ಲಿ ಮೇಲಿನಿಂದ ನಮಗೆ ಕಾಣಿಸುತ್ತದೆ.  ನಾವು ನಿಂತಿರುವ ಎತ್ತರದ ಅರಿವು ನಮಗೆ ಉಂಟಾಗುತ್ತದೆ. ಕಥೆ ಅಲ್ಲಿಗೆ ಮುಗಿಯುವುದಿಲ್ಲ,  ಆ ತಿರುವುಗಳಾಚೆಗೂ ಇನ್ನೂ ಪ್ರಪಾತ ಮುಂದುವರೆದಿದ್ದು, ಅಲ್ಲಿಂದ ಮತ್ತೆ ನೂರಿನ್ನೂರು ಅಡಿ ಕೆಳಗೆ ಇಳಿದರೆ ನೆಲಮಟ್ಟಕ್ಕೆ ತಲುಪುತ್ತೇವೆ.  ನಮ್ಮ ಹಿಂದಿನಿಂದ ಸಾಗಿದ ಯಾವುದೇ ವಾಹನವು ಇಪ್ಪತ್ತು ನಿಮಿಷಗಳ ನಂತರ ಸಣ್ಣ ಬೆಂಕಿಪೆಟ್ಟಿಗೆಯ ಗಾತ್ರದಲ್ಲಿ ಈ ತಿರುವುಗಳನ್ನು ದಾಟುವುದನ್ನು ನೋಡಬಹುದು.  ನಿಜವಾಗಿ ಮೈ ನ...