FISHERMAN AT K. R. SAGARA.
ಹೊನ್ನೀರಿನಲ್ಲಿ ಮೀನುಗಾರ.
ಕೆ.ಆರ್.ಎಸ್.ನ ಮುಖ್ಯರಸ್ತೆಯಲ್ಲಿನ ಸೇತುವೆಯ ಮೇಲೆ ನಿಂತರೆ ಚೆಂದವಾದ ಸೂರ್ಯೋದಯದ ದೃಶ್ಯಗಳು ಹೇರಳವಾಗಿ ಸಿಗುತ್ತವೆ. ಒಂದಾನೊಂದು ದಿನ ಬೆಳ್ಳಂಬೆಳಗ್ಗೆ ಕ್ಯಾಮೆರಾವನ್ನು ಹೆಗಲಿಗೇರಿಸಿಕೊಂಡು ಓಡಿದೆ. ಉದಯಕ್ಕೆ ಮುನ್ನವೇ ಅಲ್ಲಿ ತಲುಪಿ, ಕಾದು, ಹಲವಾರು ಚಿತ್ರಗಳನ್ನು ತೆಗೆದೆ. ಈ ಸಂದರ್ಭಕ್ಕೆ ಇದೇ ಪ್ರಶಸ್ತವೆಂದು ಭಾವಿಸಿ ಇಲ್ಲಿ ಟಂಕಿಸಿದ್ದೇನೆ.
೭೦-೩೦೦ ಮಿ.ಮೀ ದೂರದರ್ಶಿ ಮಸೂರವನ್ನು ಬಳಸಿ ಸೆರೆಹಿಡಿದ ದ್ರಶ್ಯವಿದು. ಇಡೀ ನದೀಪಾತ್ರವೇ ಅರುಣೋದಯದ ಹೊಂಬಣ್ಣದಲ್ಲಿ ಮುಳುಗಿರುವಾಗ ಅದರ ಮಧ್ಯೆ ಮೀನುಗಾರನಿರುವಲ್ಲಿ ಮಾತ್ರ ಸೂರ್ಯನ ಪ್ರತಿಬಿಂಬವಿದೆ. ಅವನೊಬ್ಬನ ಹಿನ್ನೆಲೆಯಲ್ಲಿ ಮಾತ್ರ ವರ್ಣಭೇದವುಂಟಾಗಿದೆ, ಅದು ಈ ದೃಶ್ಯಕ್ಕೊಂದು ಆಯಾಮವನ್ನು ನೀಡುತ್ತದೆ. ಪಿ ಕೆ ಎಫ್ ಮುಂತಾದ ಕೆಲವು ಛಾಯಾಗ್ರಹಣಪ್ರವರರ ಪ್ರಕಾರ, ಚಿತ್ರದಲ್ಲಿ ಎಡಕ್ಕೆ ಮುಖ್ಯವಸ್ತುವನ್ನಿಟ್ಟರೆ ಬಲಕ್ಕೆ ಅದನ್ನು ಸರಿತೂಗಿಸಬಲ್ಲಂತಹಾ ಪ್ರಮುಖ ಮತ್ತೊಂದು ವಿಷಯವಸ್ತುವನ್ನಿಡಬೇಕು. ಆದರೆ ಇಲ್ಲಿ ಹಾಗೆ ಮಾಡದೇ ಮೀನುಗಾರನ ಹಿನ್ನೆಲೆಗೇ ಸೂರ್ಯನ ಪ್ರತಿಬಿಂಬ ಬರುವಂತೆ ಮಾಡಿದ ಔಚಿತ್ಯವೇನೆಂದರೆ- ಅವನೇ ಇಲ್ಲಿ ಪ್ರಧಾನನು. ರೈತನಂತೆ ಇವನೂ ಒಬ್ಬ ಕಾಯಕಯೋಗಿಯು ಆದ್ದರಿಂದ, ಸಮೂಹದಲ್ಲಿ ಅವನ ಪಾತ್ರ ಹಿರಿದು ಎಂಬ ಆಶಯದಿಂದ. ದುಡಿದು ಜೀವಿಸುವವರೆಲ್ಲಾ ಶ್ರೇಷ್ಠರೇ ಆದರೂ, ಇಂಥಾ ಕೆಲವರನ್ನು ಮಾತ್ರವೇ ಸಮಾಜವು ಕಾಯಕಯೋಗಿ ಎಂದು ವಿಶೇಷೀಕರಿಸುವುದಲ್ಲವೇ?

Comments
Post a Comment