VARUNA LAKE.
ವರುಣಾ-ಕರುಣಾ...
ಮೈಸೂರಿನಿಂದ ತಿ. ನರಸೀಪುರಕ್ಕೆ ಹೋಗುವ ಮಾರ್ಗದಲ್ಲಿ ಅನತಿ ದೂರದಲ್ಲೇ ವರುಣಾ ಗ್ರಾಮವೂ, ಅಲ್ಲೇ ಎಡಬದಿಗೆ ವರುಣಾಕೆರೆಯೂ ಸಿಗುತ್ತವೆ. ಇತ್ತೀಚೆಗಂತೂ ದಸರಾ ಕಾಲದಲ್ಲಿ ಜಲಕ್ರೀಡೆಗಳಿಗೋಸ್ಕರ ಇದನ್ನು ತುಂಬಿಸಿರುತ್ತಾರೆ. ಕೆಲವರ್ಷಗಳ ಹಿಂದೆ ಈ ಕೆರೆಯ ಎಡಪಕ್ಕದಲ್ಲಿ ಸಮೃದ್ಧವಾದ ಮರಗಳ ತೋಪೊಂದಿತ್ತು. ಕ್ರಮೇಣ ಅವುಗಳು ಒಂದೊಂದಾಗಿ, ಗುಂಪುಗುಂಪಾಗಿ ನಮಗೆಲ್ಲಾ ಅರ್ಥವಾಗದ ಯಾವುದೋ ಘನವಾದ ಕಾರಣಗಳಿಂದ ಕೊಡಲಿಗಳಿಗೆ ಬಲಿಯಾದವು. ಹಲವಾರು ಸಲ ಆ ತಾಣಕ್ಕೆ ಹೋಗಿಬರುವ ಪರಿಪಾಠವನ್ನಿಟ್ಟುಕೊಂಡಿದ್ದ ನನಗೆ ಈ ವೃಕ್ಷಹನನ ನೋವನ್ನುಂಟುಮಾಡಿತು. ನನ್ನದೇ ರೀತಿಯಲ್ಲಿ ಇದನ್ನು ಹೀಗೆ ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದೇನೆ.
ಪ್ರಕೃತಿ ಸುಂದರ: ಎಂದು ಭಾವುಕವಾಗಿ ಇಲ್ಲಿನ ಮೇಘಮಾಲಾಲಂಕೃತವಾದ ಆಕಾಶವನ್ನೂ, ೨/೩ ಅನುಪಾತದಲ್ಲಿ ದೃಶ್ಯವಾಗಿ ಸಂಯೋಜಿಸಿರುವುದನ್ನೂ ಈ ಸಲ ಪ್ರಸ್ತಾಪಿಸುತ್ತಿಲ್ಲ- ಅವುಗಳನ್ನು ಬಿಟ್ಟು, ಇಲ್ಲಿ ಮುನ್ನೆಲೆಯಲ್ಲಿ ಕಾಣುತ್ತಿರುವ ಮರಗಳ ಕರುಣಾಕಥೆಯ ಕಡೆ ಗಮನ ಸೆಳೆಯುತ್ತಿದ್ದೇನೆ. ಶಿರಚ್ಛೇದನಕ್ಕೆ ಒಳಗಾಗಿರುವ ತಮ್ಮವನೇ ಆದ ಮಿತ್ರನ[ಮಧ್ಯದಲ್ಲಿರುವ ತುಂಡಾದ ಮರ] ಅವಸಾನವನ್ನು ಕಣ್ಣಾರೆ ಕಂಡು, ಎಡ -ಬಲಗಳ ಮರಗಳು ಕೈಚಾಚಿ "ಹೋಗಿಬಿಟ್ಟೆಯಾ,, ಗೆಳೆಯಾ ಹೋಗಿಬಿಟ್ಟೆಯಾ?" ಎಂದು ಆಕ್ರಂದನ ಮಾಡುತ್ತಿರುವಂತಿದೆಯಲ್ಲವೇ? ಅಲ್ಲೇ ಬಲಗಡೆ ಮುನ್ನೆಲೆಯಲ್ಲಿ ಕಾಣುವ ಮೂರನೆಯ ಮರವು ದುಃಖದ ತುರೀಯಾವಸ್ಥೆಯನ್ನು ತಲುಪಿ, ಆ ದಿಕ್ಕಿಗೇ ಬೆನ್ನು ಹಾಕಿ ವಿಮುಖಗೊಂಡು ಸ್ತಬ್ದವಾಗಿರುವಂತೆ ಕಾಣುವುದಿಲ್ಲವೇ? ಈ ದಾರುಣವನ್ನು ನೋಡಿ ಆಗಸವೂ ಗಾಢವರ್ಣವನ್ನು ಹೊಂದಿ ವಿಷಾದಸೂಚನೆ ಮಾಡುತ್ತಿರುವಂತೆ ಕಾಣುವುದಿಲ್ಲವೇ? ಆ ದಡದ ಮಂಟಪವೊಂದು ಮೂಕಸಾಕ್ಷಿಯಾಗಿ ಕಾಣಬರುತ್ತಿರುವುದು.

Comments
Post a Comment