LINE OF BEGGERS.
ಸಾಲು ಭಿಕ್ಷುಕರು.

ನಗರದ ವಾಣಿಜ್ಯಸಂಕೀರ್ಣವೊಂದರ ಆವರಣಗೋಡೆಯ ವಿನ್ಯಾಸವಿದು. ಒಳಗೆ ಬ್ಯಾಂಕೊಂದರ ಎಟಿಎಂ ಇದೆ. ಹಾಗಾಗಿ ಅದರ ಸೂಚನಾಫಲಕವೂ ಮುಂದೆ ಇದೆ. ಈ ಆವರಣಗೋಡೆಯ ವಿನ್ಯಾಸವನ್ನು ನೋಡಿ- ಎರಡೂ ಕೈಗಳಲ್ಲಿ ಭಿಕ್ಷಾಪಾತ್ರೆಯನ್ನು ಎತ್ತಿ ಹಿಡಿದು ಸಾಲಾಗಿ ನಿಂತು ಅಂಗಲಾಚುತ್ತಿರುವಂತೆ ಕಾಣುವುದಿಲ್ಲವೇ? ಇದನ್ನೇ ಸಾಲು ಭಿಕ್ಷುಕರು ಎಂದು ಕರೆದದ್ದು. ಹಿನ್ನೆಲೆಯೆಲ್ಲಿ ಕಾಣುವ ಎಟಿಎಂನ ಬೋರ್ಡು ಈ ಸಾಲಿಗೆ ಒಂದು ತಾಳಮೇಳವನ್ನೊದಗಿಸಿದೆ.
ನಗರವಾಸಿಗಳಾದ ನಾವೆಲ್ಲರೂ ಈ ಎಟಿಎಂ ಸೌಲಭ್ಯವನ್ನು ವಿಪರೀತ ಎನ್ನುವಷ್ಟು ಹಚ್ಚಿಕೊಂಡುಬಿಟ್ಟಿದ್ದೇವೆ. ಹೆಚ್ಚಿನ ಹಣವನ್ನು ಇಂದಿಗೂ ಜತೆಗಿರಿಸಿಕೊಂಡಿರುವುದಿಲ್ಲ. ಯಾವುದಾದರೂ ಎಟಿಎಂ ಇರುತ್ತಲ್ಲ? ಬೇಕಾದಾಗ ಹಣ ಪಡೆದುಕೊಂಡರಾಯಿತು ಎಂಬ ಧೋರಣೆ! ಆದರೆ ಇತ್ತೀಚಿಗೆ ವಿಚಿತ್ರವಾದ ಬಿಕ್ಕಟ್ಟೊಂದು ಏರ್ಪಟ್ಟಿತು. ಬ್ಯಾಂಕುಗಳ ಮುಷ್ಕರ, ರಜಾದಿನಗಳು ಒಟ್ಟೊಟ್ಟಿಗೇ ಬಂದವು, ಮೂರ್ನಾಲ್ಕು ದಿನಗಳು ಬ್ಯಾಂಕುಗಳು ಮುಚ್ಚಿದ್ದವು. ಎಟಿಎಂಗಳಿಗೆ ಹಣದ ಮರುಪೂರಣದ ವ್ಯವಸ್ಥೆಯೂ ಆಗಲಿಲ್ಲ. ಹಾಗಾಗಿ ಮೊದಲ ಒಂದೆರಡು ದಿನಗಳಲ್ಲೇ ಎಟಿಎಂಗಳಲ್ಲಿ ಹಣ ಮುಗಿದುಹೋಗಿ , ಜನರು ಪರದಾಡುವಂತಾಯ್ತು. ಎಲ್ಲಿ, ಯಾವ ಎಟಿಎಂ ನೋಡಿದರೂ ಅದರ ಮುಂದೆ ಸಾಲಾಗಿ ಕಾದು ನಿಂತ ಗ್ರಾಹಕರು! ನಾನು ಇಲ್ಲಿ ಕಾಯಲಿಲ್ಲವೆಂದರೆ ಇನ್ನೆಲ್ಲೋ ಬೇರೆ ಇನ್ಯಾವುದೋ ಎಟಿಎಂ ಮುಂದೆ ಕಾದಿದ್ದೆ ಎಂದರ್ಥವಷ್ಟೇ ! ಈ ಸನ್ನಿವೇಶವನ್ನು ಕಂಡ ನನಗೆ ಈ ದೃಶ್ಯ ರೂಪಕವೆನ್ನಿಸಿತು- ಈ ಸಾಲು ಭಿಕ್ಷುಕರು ಬೇರೆ ಯಾರೋ ಅಲ್ಲ! ಪರಂತು, ನಾವೇ! ಚೋದ್ಯವಲ್ಲವೇ?
Comments
Post a Comment