NUGU BACKWATERS.



      ನೆಲದಂಚು-ನೀರಂಚು. 



       ಹೆಚ್.ಡಿ.ಕೋಟೆ - ಬೇಗೂರು  ರಸ್ತೆಯಲ್ಲಿ ಬೀರ್ವಾಳು  ಎಂಬಲ್ಲಿ ನುಗು ಜಲಾಶಯವಿದೆ. ರಸ್ತೆಯ  ಬಲಕ್ಕೆ ಜಲಾಶಯದ ಹಿನ್ನೀರು, ಎಡಕ್ಕೆ  ಬೆಟ್ಟಗಳ ಸಾಲು.  ಆ ಬೆಟ್ಟಗಳ ಮೇಲೆ ಹತ್ತಿ ಅಲ್ಲಿಂದ ಕಾಣಬಹುದಾದ ದೃಶ್ಯವನ್ನು  ಸೆರೆಹಿಡಿಯುವ  ಮನೀಷೆ  ನನಗಿತ್ತು.  ಬೈಕನ್ನು  ರಸ್ತೆಯ ಪಕ್ಕಕ್ಕೆ ನಿಲ್ಲಿಸಿ, ಕಾಲುದಾರಿಯ ಮೂಲಕ  ಹತ್ತಿ ಏರಿದೆ. ಪುಣ್ಯಕ್ಕೆ ಯಾವ ಆನೆ ಇತ್ಯಾದಿಗಳೂ ಕಾಣಲಿಲ್ಲ.  ಮೇಲೆ ಹತ್ತಿ ಒಂದೆರಡು ಚಿತ್ರಗಳನ್ನು ತೆಗೆಯುವಷ್ಟರಲ್ಲಿ, ಕೆಳಗೆ  ರಸ್ತೆಯಲ್ಲಿ ಈ ಕಾರು ಬಂದು ನಿಂತಿತು. ಕುತೂಹಲಿಗಳೆಂದುಕೊಂಡು ಸುಮ್ಮನಾದೆ.  ಕಾರಿನ ಒಳಗಿಂದೊಬ್ಬ  ಕೈಯಾಡಿಸುತ್ತಿದ್ದಂತೆ ಸ್ವಲ್ಪ ಕಾಣಿಸಿತು.  ನನ್ನ ಕೆಲಸ  ಮುಂದುವರೆಸಿದೆ.  ನನ್ನ ಹಿಂದೆ ಏನೋ  ಸರಸರ ಶಬ್ದ: ನನಗೆ ಕಾರಿನವನ  ಕೈಸನ್ನೆ ನೋಡಿ  ನನ್ನ ಬೈಕಿನ ಬಗ್ಗೆ  ಏನಾಯಿತೋ ಎಂಬ ಆತಂಕ.  ದಡದಡನೆ  ಇಳಿದು ಬಂದೆ.  ಕಾರಿನವನು  ಆಶ್ಚರ್ಯದಿಂದ ಕೇಳಿದ  "ಸಾರ್, ಆನೆಯನ್ನ ಶೂಟ್ ಮಾಡಿದ್ರಾ?" ಎಂದು.   ನಾನು-  "ಇಲ್ಲಪ್ಪ,  ನಾನು ಅದಕ್ಕೆ ತಕ್ಕ ಲೆನ್ಸನ್ನು ಒಯ್ದಿರಲಿಲ್ಲ. ಹಾಗಾಗಿ ತೆಗೆಯಲಿಲ್ಲ. ಅದ್ಸರಿ, ಅಲ್ಲಿ ಆನೆ ಎಲ್ಲಿ ಬಂತು- ನಿಮ್ಮ ಕಣ್ಣಿಗೆ?" ಎಂದು ಕೇಳಿದೆ.  ಅವನು ಇಷ್ಟಗಲ ಬಾಯಿ ತೆರೆದು- " ಸಾರ್, ಆನೆ ನಿಮ್ಮ ಹಿಂದೆಯೇ ಇತ್ತಲ್ಲ? ನೀವು ಅದನ್ನು ಶೂಟ್ ಮಾಡಲಿಕ್ಕೇ  ಹೋಗಿದ್ರಿ ಅಂತ ಅಂದುಕೊಂಡೆವು" ಎಂದ.  ಈಗ  ಉತ್ತರ ಹೇಳುವ ಬದಲು   ಹಾಗೆ ಬಾಯಿ ತೆರೆಯುವ ಸರದಿ  ನನ್ನದಾಯಿತು-  ಒಂದು, ಆನೆ ಚಿತ್ರ ಸಿಗಲಿಲ್ಲವಲ್ಲಾ  ಎಂದು ಹತಾಶೆಯಿಂದ, ಎರಡು  ಜೀವ ಉಳಿಯಿತಲ್ಲ ಎಂದು,  ಭಯದಿಂದ. ನಾನು ಬೆಟ್ಟದ ಏರಿನ ಕಡೆ ಬೆನ್ನು ಮಾಡಿ, ಇಳಿಜಾರಿನ ಕಡೆ ಅಥವಾ  ನೀರಿನ ಕಡೆ  ಮುಖ ಮಾಡಿ ನಿಂತಿದ್ದೆ. ಆನೆ ಬಂದದ್ದು ನನಗೆ ಗೊತ್ತಾಗುವ ಸಂದರ್ಭವೇ ಇರಲಿಲ್ಲ. ಸದ್ಯ ಬಚಾವಾದೆ ಎಂದುಕೊಂಡೆ.  [ಅದು  ಒಂಟಿ ಸಲಗವಂತೆ! ಕಾರಿನವನ ಪ್ರಕಾರ]

      ಇರಲಿ, ವಿಷಯಕ್ಕೆ ಬರೋಣ.  ಈ ಚಿತ್ರದಲ್ಲಿ  ಹಸಿರು ಸೇರಿದಂತೆ  ಮಣ್ಣುನೆಲೆದ ತೀರ  ಡೊಂಕುಡೊಂಕಾಗಿ  ಸಾಗಿದರೆ, ಸಹಜವಾಗೇ  ಜಲಾಶಯದ ನೀರೂ  ಅದನ್ನನುಸರಿಸಿ  ನಿಂತಿದೆ.  ಆಕಾಶದ ನೀಲಿ-  ಕೆಳಗಿನ ಹಸಿರುಗಳ ತಾಳ-ಮೇಳದಲ್ಲಿ  ಮಧ್ಯೆ  ಮಣ್ಣಿನ ನೆಲದ ಇರವು,  ವಿಶಿಷ್ಟವಾದ ಶೋಭೆಯನ್ನು ತರುತ್ತದೆ.  ಎತ್ತರದಿಂದ  ಚಿತ್ರಿಸಿರುವುದು  ಈ ದೃಶ್ಯಕ್ಕೆ  ಬೇಕಾದ ಆಳವನ್ನು[depth] ಕೊಟ್ಟಿದೆ  ಎಂದು ನನ್ನ ವಾದ. ಅದಕ್ಕಾಗಿಯೇ ನಾನು ಬೆಟ್ಟವನ್ನೇರಿದ್ದು. 

       



Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....