BEFORE HARVEST..
ಸಂಕ್ರಾಂತಿಗೆ ಮುನ್ನ ಕಟಾವಿಗೆ ಸಿದ್ಧವಾಗಿರುವ ಬೆಳೆ ...
ಶ್ರೀರಂಗಪಟ್ಟಣದಿಂದ ಕರಿಘಟ್ಟಕ್ಕೆ ಹೋಗುವ ದಾರಿಯಲ್ಲಿ ಇಕ್ಕೆಲಗಳಲ್ಲೂ ಪಚ್ಚೆಹಸಿರು: ಭತ್ತದ ಗದ್ದೆಗಳು. ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ವೇಳೆಯಲ್ಲಿ ಪೈರು ಕಟಾವಿಗೆ ಸಿದ್ಧಗೊಂಡಿರುತ್ತದೆ. ಈ ಭತ್ತದ ಗದ್ದೆಗಳು ಕಟಾವಿಗೆ ಪಕ್ವವಾದ ಸಮಯದಲ್ಲಿ ವಿಶಿಷ್ಟವಾದ ಹೊಂಬಣ್ಣವನ್ನು ತಳೆಯುತ್ತವೆ, ನಮ್ಮಗಳ ಮನಸ್ಸಿಗೆ ಚೇತೋಹಾರಿಯಾಗಿ ಪರಿಣಮಿಸಿ ದೇಶ್ ಎಂಬ ರಾಗದ ಭಾವರೂಪವಾದ ಆನಂದವನ್ನುಂಟುಮಾಡುತ್ತದೆ. ಇರಲಿ, ಈ ದೇಶ್ ರಾಗದ ವಿಷಯ ಸದ್ಯಕ್ಕೆ ಬೇಡ.
ಪ್ರಸ್ತುತ ಚಿತ್ರದಲ್ಲಿ ಹಳದಿಯಿಂದ ಪ್ರಾರಂಭವಾಗುವ ಬಣ್ಣಗಳ ಹರವು, ಮೇಲೆ ಆಕಾಶದಲ್ಲಿನ - ಹಳದಿಗೆ ಪ್ರತ್ಯರ್ಥಿಯಾದ ನೀಲಿಬಣ್ಣದೊಂದಿಗೆ ಪರ್ಯಾವಸಾನಗೊಂಡಿದೆ. ಮುನ್ನೆಲೆಯಲ್ಲಿನ ಈ ಹಳದಿಯ ವಿಜೃಂಭಣೆ ಅದರ ಹಿಂದಿರುವ ಕಬ್ಬಿನಗದ್ದೆಗಳ ಹಸಿರಿನಿಂದ ಬೆಂಬಲಿಸಲ್ಪಟ್ಟರೂ, ಹಿನ್ನೆಲೆಯಲ್ಲಿನ ಬೆಟ್ಟದ ಭಾಗದ ಹಾಗೂ ಆಗಸದ ಶಾಂತವಾದ, ಪೇಲವವಾದ ಬಣ್ಣಗಳ ಸರಹದ್ದಿನಿಂದ ಸಹಕರಿಸಲ್ಪಡದೇ, ಒಂಟಿಯಾಗಿ ಉಳಿದಿದೆ. ಮಧ್ಯದಲ್ಲಿ ಇರುವ ತೆಂಗಿನ ಮರಗಳು, ಈ ತುಮುಲದಲ್ಲಿ ತಾವೂ ಸಕ್ರಿಯವಾಗಿ ಇದ್ದೇವೆ ಎನ್ನುವಂತೆ ತಂತಮ್ಮ ಹಳದಿ ಬಣ್ಣದ ಹಣ್ಣುಗರಿಗಳನ್ನು ತೋರಿಸುತ್ತಾ ಕೂಗುತ್ತಿರುವಂತಿದೆ.

Comments
Post a Comment