MADIKERI FORT VIEW......
ಮಡಿಕೇರಿ ಕೋಟೆ ಮತ್ತು ಮುಂದಿನ ರಸ್ತೆ..
ಮಾಂದಲಪಟ್ಟಿಯಿಂದ, ಮಡಿಕೇರಿಯ ಒಳಗೆ ಹೋಗದೇ ಸೋಮವಾರಪೇಟೆ ರಸ್ತೆಗೆ ತಲುಪುವ ಮಾರ್ಗ ನನಗೆ ಸ್ವಲ್ಪ ವಾಂಛೆಯೇ ಎನಿಸುತ್ತದೆ. . ಹಾಗೆ ನೋಡಿದರೆ ಇಡೀ ಮಡಿಕೇರಿಯೇ ಒಂದು ದೃಶ್ಯಶಿಲ್ಪ! ಸಾಲದ್ದಕ್ಕೆ ಈಗ ಹೇಳಿದ ರಸ್ತೆಯಲ್ಲಿ ಬರುತ್ತಿದ್ದಾಗ ದೂರದರ್ಶಿ ಮಸೂರವೂ ನನ್ನ ಬತ್ತಳಿಕೆಯಲ್ಲಿತ್ತು. ಮೇಲಿನ ದೃಶ್ಯ ಕಂಡೊಡನೆ ವಾಹನವನ್ನು ಬದಿಗೆ ನಿಲ್ಲಿಸಿ, ಕ್ಯಾಮರಾ ಗುರಿಮಾಡಿದೆ. ಸುಮಾರು ಒಂದೂವರೆ ಕಿ.ಮೀ. ನೇರ ದೂರದ ನೋಟವದು. ಒಂದು ಮೆಟ್ಟಿಲು ಕಡಿಮೆಯೇ ಬೆಳಕಿಗೀಡುಮಾಡಿ ಕ್ಲಿಕ್ಕಿಸಿದೆ. ಅದರ ಫಲಿತವಿಲ್ಲಿದೆ.
ಸುತ್ತಲಿನ ಹಸಿರು ಕಪ್ಪುಛಾಯೆಗೊಳಪಟ್ಟು ಸ್ವಲ್ಪ ಕತ್ತಲಿನ ಭಾವವನ್ನು ಮೂಡಿಸುವಂತಿದೆ, ಅದಕ್ಕೆ ಪೂರಕವಾಗಿ ಅಲ್ಲಲ್ಲಿ ಕಟ್ಟಡಗಳೂ ತಮ್ಮ ನಿಲುವುಗಳ ಕಾಣಿಕೆಯನ್ನು ನೀಡಿವೆ. ಆದರೆ, ಮಧ್ಯದಲ್ಲಿ ಕಾಣುವ ರಸ್ತೆಯ ಬಣ್ಣವು ತಿಳಿಯಾಗಿದ್ದು, ಹಿನ್ನೆಲೆಯಿಂದ ತನ್ನನ್ನು ಮತ್ತು ತನ್ನ ಮೇಲಿರುವ ವಾಹನಗಳನ್ನು ಪ್ರತ್ಯೇಕಿಸಿ- ಎತ್ತಿ ತೋರಿಸುತ್ತದೆ. ಅದೃಷ್ಟವಶಾತ್, ಆ ವಾಹನಗಳ ಬಣ್ಣಗಳೂ ತಿಳಿಜಾತಿಯವೇ ಆಗಿವೆ. ಕೋಟೆಯ ಎತ್ತರ ಹಾಗೂ ಇತರ ಕಟ್ಟಡಗಳ ಎತ್ತರ ನಮಗೆ ವಾಸ್ತವ ಗಾತ್ರದ ಅಂದಾಜನ್ನುಂಟುಮಾಡುತ್ತವೆ. ಮುನ್ನೆಲೆಯಲ್ಲಿ ಸರಹದ್ದಿನಲ್ಲಿ ಕಾಣುವ ಹಸಿರಿನ ಗಾಢತೆಗೂ, ಮಧ್ಯದಲ್ಲಿ ಇಡೀ ಚಿತ್ರದಲ್ಲಿ ವ್ಯಾಪಿಸಿರುವ ಹಸಿರಿನ ಗಾಢತೆಗೂ ಮತ್ತು ರಸ್ತೆಯ ಹಿಂತುದಿಯಲ್ಲಿ ಮೇಲೆ ಕಾಣಬರುವ ಹಸಿರಿನ ವೈಖರಿಗೂ ಹಂತಹಂತವಾಗಿ ವ್ಯತ್ಯಾಸವು ಏರ್ಪಟ್ಟು, ಈ ಚಿತ್ರದ ಆಳವನ್ನು ವಿಶದೀಕರಿಸುತ್ತವೆ.
ಮಧ್ಯೆ ಸಾಗುವ ರಸ್ತೆಯನ್ನು ಪ್ರಧಾನೀಕರಿಸುವ ಉದ್ದೇಶದಿಂದಲೇ ಸುತ್ತಲ ಹಸಿರನ್ನು ಅವದೀಪ್ತ ಗೊಳಿಸಿದ್ದು ಮತ್ತು ಅದರಿಂದಲೇ ಈ ಸಂಯೋಜನೆ ಪ್ರಬಲವೆನ್ನಿಸುವಂತಾದದ್ದು.

Comments
Post a Comment