END FOR THE DAY'S WORK....


         ದಿನದ ಕಾಯಕದ ಸಮಾಪ್ತಿ... 



        ಕೆ.ಅರ.ಎಸ  ನ   ಹಿನ್ನೀರಿನ ಪ್ರದೇಶದಲ್ಲಿ ಕಂಡುಬಂದ ದೃಶ್ಯವಿದು.  ಅಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಚಿತ್ರಿಸಲು ಹಲವಾರು ಬಾರಿ ಎಡತಾಕಿದ್ದೇನೆ, ನನ್ನ ಮಿತ್ರ-ಬಾಂಧವರನ್ನೂ ಕರೆದೊಯ್ದಿದ್ದೇನೆ.  ಹಾಗೊಮ್ಮೆ  ಹೋಗಿದ್ದಾಗ ಕಂಡಿದ್ದು ಇದು. ಆ ದೇಗುಲದ ಹಿಂದೆ ಸ್ವಲ್ಪ ದೂರದಲ್ಲಿ ನದೀತೀರದಲ್ಲಿ ಸರಕು-ಸಾಗಣೆ ರಿಕ್ಷಾ ಒಂದು ನಿಂತಿತ್ತು.  ಅದರ ಯಜಮಾನನೂ ಕೆಲಸಗಾರನೂ ಅಲ್ಲೇ ಮಾತಾಡಿಕೊಳ್ಳುತ್ತಿದ್ದರು.  ನನಗೆ ಕೈ ಬೆರಳೂ, ಮನಸ್ಸೂ ಚಡಪಡಿಸಿದವು.  ಕ್ಯಾಮರಾ ಗುಂಡಿಯನ್ನೊತ್ತಿ  ಶಾಂತಿಯನ್ನು  ಹೊಂದಿದೆ. 

        ಇಡೀ ದೃಶ್ಯದಲ್ಲಿ ಇಬ್ಬರೇ ಇರುವುದು, ಈ ಸಮಯದಲ್ಲಿ  ಮತ್ತೆ ಇನ್ಯಾರೂ ಆ ಪ್ರದೇಶದಲ್ಲೇ ಇರಲಿಲ್ಲ.  ಹಾಗಾಗಿ ಅಲ್ಲಿ ಅವರಿಬ್ಬರದೇ ಏಕಾಂತ,   ಅವರೊಂದಿಗೆ ಮೂಕಶ್ರೋತೃವಾಗಿ ಅವರ ವಾಹನ.  ಇವಿಷ್ಟು ಬಿಟ್ಟರೆ ಮೇಲ್ತುದಿಯಲ್ಲಿ ಮುಳುಗುತ್ತಿರುವ ಸೂರ್ಯ ಮತ್ತು ಕೊನೆಯದಾಗಿ  ಮೂರು ಸ್ತರಗಳಲ್ಲಿ ವಿಸ್ತಾರವಾಗಿ ಹರವಿಕೊಂಡಿರುವ ಅವಕಾಶ[Space]. ಈ ದೃಶ್ಯದಲ್ಲಿ ಮುಳುಗಿಬಿಟ್ಟಂತೇ  ಕಾಣುವ ಸೂರ್ಯ, ನಿರ್ಜನವಾದ ವಾತಾವರಣ, ಸೂರ್ಯಾಸ್ತದ ಛಾಯೆ,  ನಿಶ್ಚಲ ನದೀನೀರು ಇವೆಲ್ಲಾ "ದಿನ ಮುಗಿಯಿತು" ಎಂತೆಂಬ   ಅನಾಸಕ್ತಿಯನ್ನು ತೋರಿಸುತ್ತವೆ.  ಹಾಗೆ  ಎಲ್ಲರೂ ಅನಾಸಕ್ತರಾಗಿದ್ದರಿಂದಲೇ [ದಿನದ ಕೆಲಸ ಮುಗಿಯಿತೆಂದು]  ಆ ವಾಹನದವರಿಗೆ ಏಕಾಂತ-   ಲೋಕಾಭಿರಾಮ ಮಾತುಕತೆ.  ಇಲ್ಲವಾದರೆ ಆ ಕಾರ್ಮಿಕರಿಗೆಲ್ಲಿಯ ಬಿಡುವು? 

        ದೃಶ್ಯದಲ್ಲಿನ ಕೆಂಪು ಛಾಯೆ ಕೆಳಭಾಗದಲ್ಲಿ ಕಪ್ಪಗಾಗಿದ್ದು, ನೀರು- ನೆಲ- ಆಗಸ ಎಂಬ ವಸ್ತುಗಳಿಗನುಸಾರವಾಗಿ  ವಿವಿಧ  ಸ್ತರಗಳಲ್ಲಿ ಗಾಢತೆಯನ್ನು ಪಡೆದಿದೆ. ಬಲಗಡೆ ಮೇಲ್ತುದಿಯಲ್ಲಿರುವ  ಸೂರ್ಯ ಕೂಡಾ ಈ ವರ್ಣವೈಷಮ್ಯದಲ್ಲಿ ಸೇರಿಹೋಗಿ,  ಕೆಳಗೆ ಎಡತುದಿಯಲ್ಲಿರುವ  ಆ ವಾಹನ ಮತ್ತು ಅವರಿಬ್ಬರನ್ನೇ  ಎದ್ದು ಕಾಣಿಸುವಂತೆ ಮಾಡಿದೆ. 

Comments