HOUSE AT HATTIHOLE..
ಹಟ್ಟಿಹೊಳೆಯ ಮನೆ.
ಮಡಿಕೇರಿಯಿಂದ ಸೋಮವಾರಪೇಟೆಗೆ ಹೋಗುವ ರಸ್ತೆಯಲ್ಲಿ ಹಟ್ಟಿಹೊಳೆ ಎಂಬಲ್ಲಿ ಒಂದು ತೊರೆಯೂ ಅದಕ್ಕೊಂದು ಸೇತುವೆಯೂ ಇದೆ. ಕೋಟೆಬೆಟ್ಟಕ್ಕೆ ಚಾರಣಕ್ಕೆಂದು ಹೋಗುವವರು ಇಲ್ಲಿಂದಲೇ ಎಡಕ್ಕೆ ಕವಲೊಡೆವ ದಾರಿಯಲ್ಲಿ ಸಾಗಿ ಮುಂದೆ ಹೋಗುವರು. ಆ ತೊರೆಯ ಪಕ್ಕದಲ್ಲೇ ಸಾಗುವ ದಾರಿಯೇ - ಇಲ್ಲಿ ಕಾಣುತ್ತಿರುವುದು. ಅದರ ಪಕ್ಕದಲ್ಲೊಂದು ಮನೆ! [ ಅಲ್ಲಿರುವುದು ಅದೊಂದೇ ಮನೆಯಲ್ಲ, ಒಂದು ಚರ್ಚು, ಒಂದು ಶಾಲೆ ಮತ್ತು ಇತರ ಮನೆಗಳೂ ಇವೆ. ]
ನನಗಿಲ್ಲಿ ಸ್ವಾರಸ್ಯವೆನ್ನಿಸಿದ್ದು, ಇಡೀ ವಾತಾವರಣದಲ್ಲಿ ಸಹಜವಾದ ಬಣ್ಣಗಳೇ ತುಂಬಿವೆ. ಮರಗಳ ಹಸಿರು, ಆಗಸದ ನೀಲಿ, ಚಾವಣಿಯ ಹೆಂಚಿನ ಹಾಗೂ ನೆಲದ ಮಣ್ಣಿನ ಕೆಂಪು ಇತ್ಯಾದಿ ನೈಸರ್ಗಿಕವಾಗಿ - ಕೇವಲ ಕಾಣುತ್ತಿವೆಯಷ್ಟೇ ಅಲ್ಲ: ಇವೆ ಕೂಡಾ. ಆದರೆ ವೈಯುಕ್ತಿಕ ಇಷ್ಟಗಳ ಕಾರಣದಿಂದಲೋ, ವಾಸ್ತುಪ್ರಕಾರ ಎಂಬ ಉಪಾಧಿಗೆ ಅಂಜಿಯೋ ಅಂತೂ ಆ ಮನೆಗೆ ಹಚ್ಚಿರುವ ಬಣ್ಣ ಸುತ್ತಲ ದೃಶ್ಯದ ಒಟ್ಟಂದಕ್ಕೆ ಪೂರಕವಾಗಿ ಹೊಂದಿಕೊಳ್ಳುತ್ತಿಲ್ಲ: ಪರಂತು, ಹೊರತಾಗಿಯೇ ಉಳಿದುಬಿಟ್ಟಿದೆ! ಚಿತ್ರಕಲಾವಿದನೊಬ್ಬನ ಕನವರಿಕೆಗಳಲ್ಲಿ ಹೀಗೊಂದು ರಮ್ಯಹರ್ಮ್ಯವು ಮೂಡಿ, ರಸಿಕರ ಮನಸ್ಸನ್ನು ತಣಿಸಬಹುದೇನೋ! ನೋಡುಗರಾದ ನಮಗೂ ಇದು ಆಕರ್ಷಕವೆನ್ನಿಸಬಹುದು,
ಆದರೆ, ತಮ್ಮ ಪರಿಸರವನ್ನರಿಯದೇ, ಅದರೊಂದಿಗೆ ಬೇರೆಯದೇ ವಿತಂಡವಾದ ಹಾದಿಯಲ್ಲೇ ಸಾಗುವ, ಹಾಗೆ ಸಾಗಿಯೇ ಎಲ್ಲರಿಗೂ ಆಕರ್ಷಕವನೆನ್ನಿಸಬೇಕೆಂಬ, ಆದರೆ ಆ ಪ್ರಕೃತಿವಿಕೋಪಾದಿಗಳಿಂದ ಏನೂ ಹಾನಿಗೊಳಗಾಗಬಾರದೆಂಬ- ವಿಪರ್ಯಾಸದ ತುಡಿತಗಳನ್ನಿಟ್ಟುಕೊಂಡಿರುವ ನಮ್ಮಗಳ ಮನಸ್ಥಿತಿಯ ನಗ್ನಚಿತ್ರಣವಲ್ಲವೇ ಇದು?
Comments
Post a Comment