FEATURELESS FACES...

      ಚಹರೆಯಿಲ್ಲದ ಮುಖಗಳು?..... 



        ನಗರದ ಹೃದಯಭಾಗದಲ್ಲಿ ನಡೆದುಹೋಗುತ್ತಿದ್ದಾಗ ಕಂಡ ದೃಶ್ಯವಿದು.  ಹಿಂದೆಲ್ಲಾ ಬಟ್ಟೆಯಂಗಡಿಗಳಲ್ಲಿ ಇಡುತ್ತಿದ್ದ ಪ್ರದರ್ಶನದ ಬೊಂಬೆಗಳು  ಆಕರ್ಷಕವಾಗಿಯೂ ಇರುತ್ತಿದ್ದವು, ಆಪಾದಶಿರಪರ್ಯಂತ ಕಲಾವಿದನೊಬ್ಬಮಾಡಿದ ಶಿಲ್ಪದಂತೆ ಲಕ್ಷಣವಾಗಿಯೂ ಇರುತ್ತಿದ್ದವು.  ಮನೆಗಳಲ್ಲಿ ತಾಯಂದಿರು  ತಮ್ಮ ಮಕ್ಕಳನ್ನು ತಿದ್ದುವ ಸಂದರ್ಭಗಳಲ್ಲಿ " ನೀನು ಅಂಗಡಿ ಮುಂದಿಟ್ಟಿರುವ ಬೊಂಬೆಯಲ್ಲ; ಸಿಂಗರಿಸಿಕೊಂಡು ಸುಮ್ಮನೆ ನಿಂತಿರುವುದಕ್ಕೆ- ಸರಿಯಾಗಿ ಮೈ ಬಗ್ಗಿಸಿ ಕೆಲಸಮಾಡು" ಎಂದು  ಇವೇ ಬೊಂಬೆಗಳನ್ನು ಉಪಮಾನವಾಗಿ ಬಳಸಿ ಹೇಳುತ್ತಿದ್ದರು.  

          ಕಾಲ ಕಳೆಯಿತು; ಈ ಬೊಂಬೆಗಳ ರಚನೆಯೂ ಬದಲಾಯಿತು,  ಮನೆಗಳಲ್ಲಿ ತಾಯಂದಿರ-ಮಕ್ಕಳ ಮನೋಧರ್ಮವೂ ಬದಲಾದವು.  ಇಡೀ ಆಕೃತಿಯನ್ನು  ಮಾಡಿಡುವ ಬದಲು ಬೀದಿಬದಿ ವ್ಯಾಪಾರಿಗಳಿಗೂ ಕೈಗೆಟುಕುವಂತೆ ಪ್ಲಾಸ್ಟಿಕ್ ಹಾಳೆಯನ್ನು ಉಬ್ಬಿಸಿ ಮಾಡಿದ, ಮುಂಡವಷ್ಟೇ  ಇರುವ ಮಾದರಿಯ ಬೊಂಬೆಗಳು ಎಲ್ಲೆಲ್ಲೂ ಕಾಣಲಾರಂಭಿಸಿದವು.  ದೊಡ್ಡದೊಡ್ಡ ಅಂಗಡಿಗಳಲ್ಲಿ  ಸಿರಾಮಿಕ್ ಮತ್ತಿತರ ದ್ರವ್ಯಗಳನ್ನು ಬಳಸಿ ಮಾಡಿದ, ಇಡೀ ಆಕೃತಿ ಮನುಷ್ಯರಂತಿದ್ದರೂ ಮುಖಮಾತ್ರ   ಕಣ್ಣು-ಮೂಗು ಮುಂತಾದ ಯಾವ ಅಂಗಗಳೂ ಇಲ್ಲದೆ ಬೋಳುಬೋಳಾದ  ರಚನೆಯನ್ನು ಹೊಂದಿರುವಂಥವೇ ಆದವು.  ಪ್ರದರ್ಶನಕ್ಕೆಂದು ನಿಲ್ಲಿಸುವವಾದ್ದರಿಂದ  ಅವುಗಳಿಗೆ  ದೀಪಾಲಂಕಾರದ ಮರ್ಯಾದೆಯೂ ಪ್ರಾಪ್ತವಾಯಿತು.  ಛಾಯಾಗ್ರಹಣದ ಚಾಪಲ್ಯವಿರುವ ನನಗೆ ಗ್ರಾಸವೂ ಆಯಿತು;  ಯೋಚನೆಗೂ ಹಚ್ಚಿತು. 

        ನಾವುಗಳು ಈ ಬೊಂಬೆಗಳಂತೆಯೇ ಆಗಿಬಿಡುತ್ತಿದ್ದೇವೆಯೇ?  ಎಂಬುದೊಂದು ಪ್ರಶ್ನೆ  ನನಗೆದುರಾಗಿದೆ. ಕಣ್ಣು-ಮೂಗು ಬಾಯಿ ಇವುಗಳು  ಮನುಷ್ಯನ ಗುರುತಿಸುವ ಚಹರೆಗಳು- ಲಕ್ಷಣಗಳು.  ಇವನ್ನೇ  ಹಿಡಿದು ವ್ಯಕ್ತಿಯನ್ನು ಗುರುತಿಸುವುದು.  ಈ ಲಕ್ಷಣಗಳೇ ಇಲ್ಲವಾದ ಮುಖವೆಂದರೆ  ಏನರ್ಥ?   ವೈಯುಕ್ತಿಕತೆ -ಪ್ರತ್ಯೇಕತೆ-ವಿಶೇಷತೆ ಎಂಬುದೇನೂ ಇಲ್ಲ; ಇಂಥಾ ಬೊಂಬೆಗಳನ್ನು ತಯಾರಿಸುವ ಕಾರ್ಖಾನೆಗಳಿಂದ ಬಂದ  ನೂರಾರು ಒಂದೇ ತರಹದ  ಬೊಂಬೆಗಳಂತೇ ,  ನೂರಾರು ಜನಗಳ ಮಧ್ಯೆ ನಾನೂ ಗುರುತಿಸಲಾಗದಂತೆ ನಗಣ್ಯನಾಗೇ  ಇದ್ದು, ಕಳೆದುಹೋಗಿಬಿಡುವಂತಹವನು  ಎಂದಲ್ಲವೇ? ಇದನ್ನು ಸಮಾನತೆ- ಮತ್ತಿತರ ಮತಿಭ್ರಂಶಕರ ಪದಪುಂಜಗಳಿಂದ  ಸಮರ್ಥಿಸಿಕೊಳ್ಳುವ ಹೀನಾಯ ನಡೆ ನಮಗೆ ಬೇಕೇ?  ವೇದಾಂತಕ್ಕೆಂದು ತಿಳಿಯಲಾಗದಿದ್ದರೂ, ಕನಿಷ್ಠ ವ್ಯವಹಾರದಲ್ಲಿಯಾದರೂ  ವೈಯುಕ್ತಿಕ ವಿಶೇಷಭೇದಗಳನ್ನು ಗಮನಿಸಿ- ಉಳಿಸಿ -ಬೆಳೆಸಿಕೊಳ್ಳಬೇಕಲ್ಲವೇ?

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....